ಸ್ವಚ್ಛತೆಗೆ ಮಹತ್ವ ನೀಡಿ

33333
Published on

ಸಾರ್ವನಿಕರಿಗೆ ಶಾಸಕಿ ಎಂ.ರೂಪಕಲಾ ಮನವಿ - ರಾಶಿರಾಶಿ ತ್ಯಾಜ್ಯ ಕಂಡು ಅಧಿಕಾರಿಗಳಿಗೆ ತರಾಟೆ

ಕೆಜಿಎಫ್​: ನಗರದ ಎಲ್ಲ ವಾರ್ಡ್​ಗಳಲ್ಲಿ ಮನೆ ಬಾಗಿಲಿಗೆ ನಿತ್ಯ ಕಸ ಸಂಗ್ರಹಣಾ ವಾಹನಗಳು ಬರುತ್ತಿದ್ದು, ನಾಗರಿಕರು ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಕಸ ಸಂಗ್ರಹಣಾ ವಾಹನಕ್ಕೆ ಹಾಕುವ ಮೂಲಕ ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಶಾಸಕಿ ರೂಪಕಲಾ ಮನವಿ ಮಾಡಿದರು. ನಗರದ 17ನೇ ವಾರ್ಡ್​ಗೆ ಶನಿವಾರ ಅನಿರೀಕ್ಷಿತ ಭೇಟಿ ನೀಡಿದ ವೇಳೆ, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯನ್ನು ಕಂಡು ಅಸಮಾಧಾನಗೊಂಡ ಶಾಸಕಿ ರೂಪಕಲಾ, ಆರೋಗ್ಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ನಗರದ ಹಲವು ಕಡೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಿಯಮಿತವಾಗಿ ನಡೆಸದೇ ಇದ್ದುದರಿಂದ ಇಂದು ಕಸದ ರಾಶಿ ತಲೆ ಎತ್ತಿದೆ. ಈಗಾಗಲೇ ರಾಜ್ಯಾದ್ಯಂತ ಡೆಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಡಲೇ ಕಸ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಇಡೀ ನಗರದಲ್ಲಿ ಸ್ವಚ್ಛತಾ ವಾತಾವರಣ ಸೃಷ್ಟಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಯುಕ್ತ ಪವನ್​ಕುಮಾರ್​ಗೆ ಸೂಚಿಸಿದರು. ನಿತ್ಯ ಬೆಳಗ್ಗೆ ಕಸ ಸಂಗ್ರಹಣಾ ವಾಹನಗಳು ಮನೆಗಳ ಬಳಿ ಬಂದಾಗ ವಾಹನಗಳಿಗೆ ಕಸ ಹಾಕಲು ನಗರಸಭೆವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.


ವಾರ್ಡ್​ ನಂ.17ರ ಕೆಲವೆಡೆಗಳಲ್ಲಿ ವಿದ್ಯುತ್​ ಕಂಬಗಳಲ್ಲಿ ಬೀದಿದೀಪಗಳನ್ನು ಅಳವಡಿಸದೇ ಇರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ನಗರದಲ್ಲಿ ಎಲ್ಲ ಕಡೆ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಕೂಡಲೇ ಎಚ್ಚೆತ್ತುಕೊಂಡು ವಾರ್ಡ್​ನಲ್ಲಿ ಅಗತ್ಯವಿರುವ ಕಡೆಗಳಲ್ಲಿ ವಿದ್ಯುತ್​ ದೀಪಗಳನ್ನು ಅಳವಡಿಸಲು ಕ್ರಮ ವಹಿಸಬೇಕು. ನಾನು ಮತ್ತೆ ಭೇಟಿ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟವರನ್ನು ಕರೆತರಬೇಕು ಎಂದು ತಿಳಿಸಿದರು.


ಈ ವೇಳೆ ವಾರ್ಡ್​ನ ಕೆಲ ವೃದ್ಧರು ವೃದ್ಧಾಪ್ಯ ವೇತನ ಬರದೆ ಇರುವ ಬಗ್ಗೆ ಅವಲತ್ತುಕೊಂಡರು. ಶೀಘ್ರದಲ್ಲೇ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳನ್ನು ವಾರ್ಡ್​ಗೆ ಕಳುಹಿಸಿಕೊಟ್ಟು ಸಮಸ್ಯೆಬಗೆಹರಿಸುವುದಾಗಿ ಭರವಸೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಸಮಯಕ್ಕೆ ಸರಿಯಾದ ವೈದ್ಯಕಿಯ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಮಹಿಳೆಯರು ದೂರಿದರು. ಈಗಾಗಲೇ ವೈದ್ಯ ಇಲಾಖೆಯಲ್ಲಿ ವರ್ಗಾವಣೆ ಕೌನ್ಸಿಲಿಂಗ್​ ಪ್ರಾರಂಭವಾಗಿದ್ದು, ಶ್ರೀದಲ್ಲೇ ಆಸ್ಪತ್ರೆಗೆ ನುರಿತ ವೈದ್ಯರು ಬರಲಿದ್ದಾರೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net