

ತಿಪಟೂರು:ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಇಂದು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದನ್ನು ಅರ್ಥಮಾಡಿಕೊಳ್ಳಲು ಕೇವಲ ಡಿಗ್ರಿ ಸರ್ಟಿಫಿಕೇಟ್ ಸಾಲದು. ಕೌಶಲಧಾರಿತ ಶಿಕ್ಷಣ ಅಗತ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿದ್ಯಾಶಂಕರ್ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅವಿಷ್ಕಾರಗೊಳ್ಳುತ್ತಿರುವ ಆಧುನಿಕ ತಾಂತ್ರಜ್ಞಾನದ ತೆ ನಾವೆಲ್ಲರೂ ಹೊಂದಿಕೊಳ್ಳಬೇಕಾಗಿದೆ. ಚೀನಾ, ಜಪಾನ್, ಕೊರಿಯಾ, ಇತರ ದೇಶಗಳು ಹೆಚ್ಚು ತಾಂತ್ರಿಜ್ಞಾನ ಬೆಳೆಸಿಕೊಂಡು ಅಭಿವೃದ್ಧಿ ಹೊಂದುತ್ತಿವೆ. ನಮ್ಮ ದೇಶವೂ ಇದೇ ಪಥದಲ್ಲಿ ಸಾಗಬೇಕಾದರೆ ಹೆಚ್ಚು ಕೌಶಲಾಧಾರಿತ ಶಿಕ್ಷಣ ಪಡೆಯುವುದು ಅಗತ್ಯ. ನಿಮ್ಮ 4 ವರ್ಷಗಳ ಕಲಿಕೆ ಕೇವಲ ಒಂದು ಗಂಟೆಯ ಪರೀಕ್ಷೆಯ ಮೇಲೆ ನಿರ್ಧಾರವಾಗಲಿದೆ. ಈ ನಿಟ್ಟಿನಲ್ಲಿ ಓದಿನತ್ತ ನಿಮ್ಮ ಮನಸ್ಸು ಹೆಚ್ಚು ಕೇಂದ್ರೀಕೃತವಾಗಿರಬೇಕು ಎಂದರು.
ರಾಜ್ಯದಿಂದ ಪ್ರತಿ ವರ್ಷ ಒಂದೂವರೆ ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ವಿದ್ಯಾರ್ಥಿಗಳು ಹೊರ ಬರುತ್ತಿದ್ದಾರೆ. ಇವರಿಗೆಲ್ಲರಿಗೂ ಉದ್ಯೋಗ ಸೃಷ್ಟಿಸುವುದು ಸವಾಲಾಗಿದೆ. ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರಂತೆ ಹೆಚ್ಚಿನ ಮಂದಿ ಉದ್ಯೋಗದಾತರಾದಾಗ ಮಾತ್ರ ಪದವಿ ಪಡೆದ ಎಲ್ಲರಿಗೂ ಉದ್ಯೋಗ ಕೊಡಲು ಸಾದ್ಯ. ಭವಿಷ್ಯದಲ್ಲಿ ನೀವೂ ಕೂಡ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ಉದ್ಯೋಗದಾತರಾಗಿ ಇತರರಿಗೆ ದಾರಿದೀಪವಾಗಬಹುದು ಎಂದರು.
ಕೆವಿಎಸ್ ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ಬಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ಅವರಿಗೆ ಆರ್ಥಿಕ ಹೊರೆಯಾಗದಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.
350 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಎಚ್.ಎಂ. ಶ್ರುತಿ, ಗ್ರೀಷ್ಮಾ, ಡಿ. ಚಂದನಾ, ಟಿ.ಕೆ.ಸಹನಾ, ಭವ್ಯಾ ಇವರಿಗೆ ನಗದು ಪ್ರೋತ್ಸಾಹಧನ ನೀಡಲಾಯಿತು. ಕಾರ್ಯದರ್ಶಿಯಾದ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶಮೂರ್ತಿ. ಎಚ್.ಜಿ.ಸುಧಾಕರ್, ಖಜಾಂಚಿ ಟಿ.ಎಸ್.ಶಿವಪ್ರಸಾದ್, ಪ್ರಾಂಶುಪಾಲ ಡಾ. ಎಚ್.ಎಸ್.ಸತೀಶ್‌ಕುಮಾರ್, ನಿಕಟಪೂರ್ವ ಪ್ರಾಂಶುಪಾಲ ಡಾ.ಗುರುಮೂರ್ತಿ, ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.