

ತುಮಕೂರು: ಅಂಕ ಗಳಿಕೆ ಪೈಪೋಟಿ ಹುಚ್ಚು ಹಿಡಿಸದೆ, ಗುಣಾತ್ಮಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಹೆಚ್ಚು ಅಂಕ ಪಡೆಯಬೇಕೆಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನ ಕೆಲವು ಕಾಲೇಜುಗಳಲ್ಲಿ ದಿನವಿಡೀ ಡ್ರಿಲ್ ಮಾಡಲಾಗುತ್ತೆ. ಇದರ ಹೊರತಾಗಿ ಮಕ್ಕಳಿಗೆ ಮತ್ಯಾವ ಚಟುವಟಿಕೆಗಳಿಗೂ
ಅವಕಾಶ ಮಾಡಿಕೊಡುವುದಿಲ್ಲ. ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಹುಚ್ಚು ಹಿಡಿಸದೆ, ಅವರನ್ನು ಮನುಷ್ಯರನ್ನಾಗಿ ಮಾಡೋಣ ಎಂದರು.
ಕಾಲೇಜಿನ ಆಡಳಿತ ನಿರ್ವಹಣೆ ಹೊಣೆ ಹೊತ್ತಿರುವ ಪ್ರಾಂಶುಪಾಲರು ಪಾಠಪ್ರವಚನ ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ಮೇಲೂ ಗಮನಹರಿಸಿ ಸಮರ್ಪಕವಾಗಿ ನಿರ್ವಹಿಸಬೇಕು. ಕಾಲೇಜಿಗೆ ಉತ್ತಮ ಫಲಿತಾಂಶ ತರಿಸಬೇಕೆಂದು ನೀವೆಲ್ಲರೂ ಶ್ರಮ ಪಡುತ್ತಿರುವಿರಿ. ಆ ಫಲಿತಾಂಶ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಮೂಲಕ ಬರಲಿ. ಕಾಲೇಜಿನ ಕಲಿಕೆ, ಬೋಧಕರ ಮಾರ್ಗದರ್ಶನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿರಬೇಕು ಎಂದು ಹೇಳಿದರು. ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ವಿದ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕಿಯ ಕೋರ್ಸ್ಗಳ ಆಯ್ಕೆ ಬಗ್ಗೆಯೇ ಕಾಲೇಜುಗಳು, ಪಾಲಕರು ಆಸಕ್ತಿವಹಿಸುತ್ತಾರೆ. ಆದರೆ, ಇತರ ಕೋರ್ಸ್ಗಳಿಗೂ ಬೇಡಿಕೆ ಇದೆ ಎಂಬುದರ ಬಗ್ಗೆ ತಿಳಿಯಬೇಕು. ನಮ್ಮ ಮಕ್ಕಳು ಒಳ್ಳೆಯ ವಿಜ್ಞಾನಿಯಾಗಬೇಕು, ಸಮಾಜ ಕಟ್ಟುವಂತಹ ವ್ಯಕ್ತಿಗಳನ್ನು ನಿಮಾರ್ಣ ಮಾಡಬೇಕು ಎಂಬ ಚಿಂತನೆಗಳಾಗಬೇಕು. ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ, ಅವರು
ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಮೂಲಕ ಉತ್ತಮ ಸಮಾಜ ನಿಮಾರ್ಣಕ್ಕೆ ಶ್ರಮಿಸಬೇಕು ಸಲಹೆ ಮಾಡಿದರು.
ಈ ವೇಳೆ ನಿವೃತ್ತರಾದ ಪ್ರಾಂಶುಪಾಲರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ತಾಲೂಕುವಾರು ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀದೇವಿ ಟ್ರಸ್ಟ್ನ ಮಾನವ ಸಂಪನ್ಮೂಲ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ನರೇಂದ್ರ ವಿಶ್ವನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಶೇಖರ ಆರಾಧ್ಯ, ಖಜಾಂಚಿ ಜಿ.ಕೃಷ್ಣಮೂರ್ತಿ, ರಾಜ್ಯ ಪ್ರತಿನಿಧಿ ಬಿ.ಜೈರಾಮ್, ಕಾರ್ಯಾಧ್ಯೆ ಬಿ.ಪಿ.ತ್ರಿವೇಣಿ, ಚಂದ್ರಯ್ಯ ಬೆಳವಾಡಿ, ಎಸ್.ರಾಜಕುಮಾರ್, ಎಸ್.ರವಿಕುಮಾರ್, ಆರ್.ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಎಂ.ಡಿ.ಶಿವಕುಮಾರ್, ಜಗದೀಶ್ ಪ್ರಸಾದ್, ನೇ.ರಂ.ನಾಗರಾಜು, ಶಿವಣ್ಣ, ಸೋಮಸುಂದರ್, ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.