ಗಡಿಭಾಗದ ನೀರಾವರಿ ಯೋಜನೆಗೆ ಒತ್ತು ನೀಡಲಿ

15Sambaragi1
Published on

ಸಂಬರಗಿ: ಪಂಚ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಿ, ಗಡಿ ಭಾಗದ ನೀರಾವರಿ ಯೋಜನೆಗೆ ಒತ್ತು ನೀಡಬೇಕು. ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜೈ ಕರ್ನಾಟಕ ಅಧ್ಯಕ್ಷ ಡಾ. ಬಿ.ಎನ್.ಜಗದೀಶ ಹೇಳಿದರು.

ಗಡಿಭಾಗದ ಬಳ್ಳಿಗೇರಿ ಗ್ರಾಮದಲ್ಲಿ ಜೈ ಕರ್ನಾಟಕ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಗಡಿನಾಡ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿ ರೈತರ ಕನಸು ನನಸು ಮಾಡಬೇಕು ಎಂದರು.

ಗಡಿಭಾಗದ ಕನ್ನಡ ಶಾಲೆಗಳ ಸಮಸ್ಯೆ ಪರಿಹರಿಸಬೇಕು. ಹೆಚ್ಚು ಶಿಕ್ಷಕರನ್ನು ನಿಯೋಜಿಸಬೇಕು. ಈ ಗ್ರಾಮದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಮಾಡಲು ಪ್ರಯತ್ನಿಸುತ್ತೇನೆ. ಅಭಿವದ್ಧಿ ಕಾಮಗಾರಿಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಕಮರಿ ಮಠದ ಸದ್ಗುರು ಅಭಿನಯ ಜಂಗಮ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಗಡಿಭಾಗದ ಬರ ಪೀಡಿತ ಗ್ರಾಮಗಳಿಗೆ ಸರ್ಕಾರ ನೀರು ಕೊಡಲಿ ಎಂಬುವುದು ನಮ್ಮ ಬೇಡಿಕೆ. ರಾಜಕಾರಣಿಗಳು ಈ ಕುರಿತು ಪ್ರಾಮಾಣಿಕವಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಬಸವೇಶ್ವರ ಶುಗರ್ಸ್‌ ಚೇರ್ಮನ್ ರಘುನಾಥ ಕದಂ, ಬಸವೇಶ್ವರ ಶುಗರ್ಸ್ ನಿರ್ದೇಶಕ ವಿಜಯ ಕದಂ, ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ವಕೀಲ ನಿಂಗಪ್ಪ ಖೋಕಲೆ, ರಾಮಚಂದ್ರಯ್ಯ ಆರ್., ಮುನಿಸ್ವಾಮಿ, ರಜಿತ್ ಗಗನರಾಜು, ಪ್ರಾಚಾರ್ಯ ಮಹಾಲಿಂಗ ಮೇತ್ರಿ, ದೀಪಕ ಬುರ್ಲಿ, ಪ್ರಶಾಂತ ತೋಡ್ಕರ, ರೇಖಾ, ನಿಜಪ್ಪ ಹಿರೇಮನಿ ಇತರರು ಇದ್ದರು. ಆಕಾಶ ನಂದಗಾವ ಸ್ವಾಗತಿಸಿದರು. ವಿಜಯ ಪವಾರ ಮಾತನಾಡಿದರು. ಸಂತೋಷ ಬಡ್ಕಂಬೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net