

ಕೆ.ಆರ್.ನಗರ: ಮಹಿಳೆಯರು ಪದವಿ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ತರಬೇತಿ ಕೇಂದ್ರವನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಕಾಲೇಜಿನ 2024-25ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿ ಕೇಂದ್ರ ಆರಂಭ ಮಾಡುವುದರಿಂದ ಗೃಹಿಣಿಯರು ಸೇರಿದಂತೆ ಕೆಲ ಉದ್ಯೋಗಸ್ಥರು ಪದವಿ ಪಡೆಯಲು ಅನುಕೂಲವಾಗಲಿದೆ ಎಂದರು.
ಕ್ಷೇತ್ರದ ವಿದ್ಯಾರ್ಥಿಗಳಿಗಾಗಿ ಕೆ.ಆರ್.ನಗರ ಪಟ್ಟಣದಲ್ಲಿ ಐಟಿಐ, ನರ್ಸಿಂಗ್ ಮತ್ತು ಕಾನೂನು ಕಾಲೇಜು ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕಾನೂನು ಕಾಲೇಜು ಪ್ರಾರಂಭಿಸಲು ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಒತ್ತು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಸಿಕೊಡುವುದರ ಜತೆಗೆ ಸಾಂಸ್ಕೃತಿಕ ಸಭಾಂಗಣ ನಿರ್ಮಾಣ ಮಾಡಲು ಅಗತ್ಯ ಅನುದಾನ ಮಂಜೂರು ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು, ಕಳೆದ ವರ್ಷ ನೀಡಿದ ಭರವಸೆಯಂತೆ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿಕೊಡಲಾಗಿದ್ದು, 5 ಲಕ್ಷ ರೂ. ಅನುದಾನ ನೀಡಿ ಶೌಚಗೃಹ ನಿರ್ಮಾಣ ಮಾಡಿಸಲಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ನವೀಕರಣಕ್ಕಾಗಿ ಹಾಗೂ ಕಾಲೇಜಿಗೆ ಹೈಟೆಕ್ ಸ್ಪರ್ಶ ನೀಡಲು 5.20 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದ್ದು, ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ. ಮುಂದಿನ ವರ್ಷ 590 ಅಂಕ ಗಳಿಸುವ ಈ ಕಾಲೇಜಿನ ವಿದ್ಯಾರ್ಥಿನಿಯರಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಬಹಳ ಪ್ರಮುಖ ಘಟ್ಟವಾಗಿದ್ದು ದೇಶವನ್ನು ಮುನ್ನಡೆಸುವ ಯುವಜನರಾದ ನೀವುಗಳು ಜವಾಬ್ದಾರಿ ಅರಿತು ಶಿಕ್ಷಣ ಪಡೆಯಬೇಕು. ಶಿಕ್ಷಣ ಉದ್ಯೋಗ ಪಡೆಯಲು ಮಾತ್ರವಲ್ಲದೆ ಗೃಹಿಣಿಯದವರಿಗೂ ಶಿಕ್ಷಣದ ಅವಶ್ಯಕತೆಯಿದೆ ಎಂಬುವುದನ್ನು ಅರಿಯಬೇಕು ಎಂದರು.
ಮೊಬೈಲ್ ಬಳಕೆಯಿಂದ ಅನುಕೂಲಕ್ಕಿಂತ ಅನನುಕೂಲಗಳೇ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಳಸುವಾಗ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಜ್ಞಾನ ಹೆಚ್ಚಿಸುವ ವಿಚಾರಗಳನ್ನ ತಿಳಿಯುವ ಪ್ರಯತ್ನ ಮಾಡಬೇಕು ಎಂದರು.
ಪುರಸಭಾ ಅಧ್ಯಕ್ಷ ಶಿವುನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುನೀತಾ ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ, ಮೈಸೂರು ರಾಮಕೃಷ್ಣ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಎಸ್.ಬಾಲಾಜಿ, ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ರಾಮೇಗೌಡ, ಉಪನ್ಯಾಸಕ ಡಿ.ಶ್ರೀನಿವಾಸ್, ಕೃಷ್ಣ, ರುಚಿತಕೇಶವ್ ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕಳೆದ ಬಾರಿ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ 48 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾಂಗ್ರೆಸ್ ಪಕ್ಷದ ವಕ್ತಾರ ಸೈಯದ್ ಜಾಬೀರ್, ಬಗರ್ ಹುಕುಂ ಸದಸ್ಯ ಅಪ್ಪಾಜಿಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಲತಾರವಿ, ರೇಖಾ ಶ್ರೀನಿವಾಸ್, ಹರಿರಾಜ್, ಮಂಜುನಾಥ್, ಕುಮಾರ್ ಮತ್ತು ಕಾಲೇಜು ಉಪನ್ಯಾಸಕರು ಸಿಬ್ಬಂದಿ ಇದ್ದರು.