ಉನ್ನತ ಶಿಕ್ಷಣದ ಸಂಶೋಧನೆಯಲ್ಲಿ ಸತ್ಯಶೋಧನೆಗೆ ಒತ್ತು ನೀಡಲಿ: ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸಲಹೆ

2
Published on

ಮೈಸೂರು: ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ಸಂಸ್ಥೆಗಳಿಂದ ನಡೆಯುವ ಸಂಶೋಧನೆಗಳು ಸಮಾಜಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ವಿದ್ಯಾಸಂಸ್ಥೆಯ ವಿವೇಕಾನಂದ ಭವನದಲ್ಲಿ ಬುಧವಾರ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮುಂದುವರಿದ ಸಂಶೋಧನಾ ವಿಧಾನಗಳು ಮತ್ತು ಮಾರ್ಗಗಳ ವಿಷಯ ಕುರಿತ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಪ್ರಮುಖ ಅಂಗವಾಗಿದ್ದು, ಅದು ವಿವಿಧ ಆಯಾಮಗಳಲ್ಲಿ ಸತ್ಯಶೋಧನೆಗೆ ಹೆಚ್ಚು ಒತ್ತು ಕೊಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು. ಸಂಶೋಧನೆಗಳಿಂದ ಯಾವುದೇ ತೊಂದರೆಯಾಗಬಾರದೆಂದು ಹೇಳಿದರು.
ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಪ್ರೊ.ಡಿ.ಆನಂದ್ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಯುವ ಸಂಶೋಧಕರಲ್ಲಿ ವೈಜ್ಞಾನಿಕ ಆಲೋಚನೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾನವಿಕ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಹಾಗೂ ಸವಾಜಶಾಸ್ತ್ರದಂತಹ ಬಹು ಆಯಾಮದ ಸಾಮಾಜಿಕ ವಿಜ್ಞಾನದ ಸಂಶೋಧನಾ ಚರ್ಚೆಗಳು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಇವುಗಳಿಂದ ಮಾನವೀಯ ಮೌಲ್ಯಗಳು, ತತ್ವಗಳು ಮತ್ತು ಸಿದ್ಧಾಂತಗಳನ್ನು ಸಂಶೋಧನಾರ್ಥಿಗಳು ಅಳವಡಿಸಿಕೊಂಡು ಸಮಾಜದಲ್ಲಿರುವ ಬಡತನ, ಸಾಮಾಜಿಕ ಅನ್ಯಾಯಗಳನ್ನು ಸರಿಪಡಿಸುವಲ್ಲಿ ಸಂಖ್ಯಾಶಾಸ್ತ್ರ ಮತ್ತು ಗಣಿತಶಾಸ್ತ್ರದ ಅಂಕಿ-ಅಂಶಗಳ ಮೂಲಕ ಸಮಸ್ಯೆಗಳನ್ನು ತಿಳಿಯಪಡಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಂಶೋಧನೆಗಳು ಜ್ಞಾನದ ವಿಕಾಸ ಮತ್ತು ನವಪ್ರವರ್ತನೆಗಳಿಗೆ ಹೆಚ್ಚು ಒತ್ತು ಕೊಡುವಂತಿರಬೇಕು. ವಿದ್ಯಾರ್ಥಿಗಳು ಕೈಗೊಳ್ಳುವ ಸಂಶೋಧನೆಗಳು ಸಮಾಜದ ಒಳಿತಿಗೆ, ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.
ಪ್ರಾಂಶುಪಾಲರಾದ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ಇಂದಿನ ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಸಂಶೋಧನೆಗಳು ನೇರವಾಗಿ ಸಮಸ್ಯೆಗಳನ್ನು ಬಗೆಹರಿಸುವಂತಿರಬೇಕು. ಮೌಲ್ಯಯುತ ಸಂಶೋಧನೆಗಳ ಕಡೆಗೆ ಹೆಚ್ಚು ಗಮನ ನೀಡಬೇಕಿದೆ ಎಂದು ಹೇಳಿದರು.
ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಸಿ.ಕೆ.ರೇಣುಕಾರ್ಯ, ಮಹಾಜನ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ.ಪಿ.ಸರೋಜಮ್ಮ, ಐಕ್ಯೂಎಸಿ ಸಂಚಾಲಕಿ ಡಿ.ಗೀತಾ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ.ಸೋಮಶೇಖರ್, ಶೈಕ್ಷಣಿಕ ಡೀನ್ ಡಾ.ಎಚ್.ಶ್ರೀಧರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಎನ್.ವೆಂಕಟಲಕ್ಷ್ಮೀ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ದೀಪು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಇತರರು ಇದ್ದರು.
ಅರ್ಥಶಾಸ್ತ್ರ ವಿಭಾಗದ ಕೌಟಿಲ್ಯ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಾಗಾರದಲ್ಲಿ ವಿವಿಧ ವಿಭಾಗದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net