

ಹಾನಗಲ್ಲ: ಗ್ರಾಮ ಪಂಚಾಯಿತಿಗಳು ಸ್ವತಂತ್ರ ಸಂಸ್ಥೆಗಳಾಗಿದ್ದು, ಯಾರದೇ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ನಿರ್ಣಯಗಳ ಅನುಷ್ಠಾನ ಅಧಿಕಾರಿಗಳು ಮಾತ್ರ, ಗ್ರಾಪಂ ಆಡಳಿತ ಮಂಡಳಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದರೆ ಜನರ ಮನಸಲ್ಲಿ ಉಳಿಯಲು ಸಾಧ್ಯ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಪಂಗಳಲ್ಲಿ ಆಯ್ಕೆಯಾದ ಬಿಜೆಪಿ ಬೆಂಬಲಿತ ನೂತನ ಅಧ್ಯಕ್ಷ-ಉಪಾಧ್ಯಕ್ಷರುಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಲಜೀವನ ಮಿಷನ್ ಯೋಜನೆಯಡಿ ಗ್ರಾಪಂಗಳು ಠೇವಣಿ ನೀಡಿರುವುದನ್ನು ಗ್ರಾಪಂಗಳಿಗೆ ಮರಳಿಸಬೇಕು. ಈ ಠೇವಣಿಯಲ್ಲಿ ಕೈಗೊಳ್ಳುವ ಮೂಲಸೌಕರ್ಯಗಳ ಕಾಮಗಾರಿಗಳ ಕ್ರಿಯಾಯೋಜನೆ ಮಾಡಿ ಮಂಡಿಸಬೇಕು. ಇದರಲ್ಲಿ ಬೇರಾವುದೇ ಜನಪ್ರತಿನಿಧಿಗಳೂ ಹಸ್ತಕ್ಷೇಪ ಮಾಡಬಾರದು. ಹೈಮಾಸ್ಟ್ ಬೀದಿದೀಪಗಳ ಕ್ರಿಯಾಯೋಜನೆ ಕೈಗೊಳ್ಳಲು ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಮಣಿಯದಂತೆ ಅಗತ್ಯ ಕಾಮಗಾರಿಗಳ ತೀರ್ಮಾನ ತೆಗೆದುಕೊಳ್ಳಬೇಕು. ಯಾರಿಗೋ ಗುತ್ತಿಗೆ ಕೊಡಿಸುವ ಹುನ್ನಾರಕ್ಕೆ ಗ್ರಾಪಂಗಳು ಮಣಿಯಬಾರದು ಎಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಪಾರದರ್ಶಕ ಆಡಳಿತದ ಮೂಲಕ, ನಿಮ್ಮ ಅವಧಿಯ ಅಭಿವೃದ್ಧಿ ಕಾರ್ಯಗಳು ನಿಮ್ಮನ್ನು ಗುರುತಿಸುವಂತಾಗಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ಸಂಸದರಿಗಿರುವಷ್ಟೇ ಜವಾಬ್ದಾರಿ ಗ್ರಾಪಂ ಸದಸ್ಯರಿಗಿದೆ. ಜನಸಾಮಾನ್ಯರ ಬೇಡಿಕೆಗೆ ಅನುಗುಣವಾಗಿ ಕ್ರಿಯಾಯೋಜನೆ ರಚಿಸಬೇಕು ಎಂದರು.
20 ಜನ ಗ್ರಾಪಂ ಅಧ್ಯಕ್ಷರು ಹಾಗೂ 22 ಜನ ಉಪಾಧ್ಯಕ್ಷರುಗಳನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ಹಾವಣಗಿ ಗ್ರಾಪಂ ಅಧ್ಯಕ್ಷ ಆನಂದ ಹವಳಣ್ಣನವರ ಮಾತನಾಡಿದರು. ಗ್ರಾಪಂಗಳ ಸದಸ್ಯರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಬಿಜೆಪಿ ಯುವ ಘಟಕದ ಅಧ್ಯಕ್ಷ ಚಂದ್ರು ದೊಡ್ಡಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮನೋಜ ದೇಸಾಯಿ, ಬಿಜೆಪಿ ಪ್ರಮುಖರಾದ ಎ.ಎಸ್. ಬಳ್ಳಾರಿ, ಪದ್ಮನಾಭ ಕುಂದಾಪುರ, ರಾಜಣ್ಣ ಪಟ್ಟಣದ, ವಿರೂಪಾಕ್ಷಪ್ಪ ನಿಂಬಣ್ಣನವರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಚಂದ್ರಣ್ಣ ಹರಿಜನ ಇತರರಿದ್ದರು. ಬಿಜೆಪಿ ಕಾರ್ಯದರ್ಶಿ ಮಹೇಶ ಕಮಡೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಸೆ. 8ರಂದು ಬೆಳಗ್ಗೆ 11 ಗಂಟೆಗೆ ಹಾನಗಲ್ಲಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬರಗಾಲ ಘೊಷಣೆ, ಬೆಳೆ ಪರಿಹಾರ, ಬೆಳೆ ವಿಮೆ ಬಿಡುಗಡೆಗೆ ಒತ್ತಾಯಿಸಲಾಗುವುದು. | ನಿಂಗಪ್ಪ ಗೊಬ್ಬೇರ, ಬಿಜೆಪಿ ತಾಲೂಕಾಧ್ಯಕ್ಷ, ಹಾನಗಲ್ಲ