ಸಂಗೀತ, ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಒತ್ತಾಯ

BLY- 12-5
ಸಂಗೀತ, ಚಿತ್ರಕಲಾ, ರಂಗ ಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಎಐಡಿವೈ ಯುವಜನ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ಜಿಲ್ಲಾಧ್ಯಕ್ಷ ಎ.ಪಂಪಾಪತಿ ಕೋಳೂರು, ಚಿತ್ರಕಲಾ, ಸಂಗೀತ ಮತ್ತು ರಂಗಕಲಾ ಶಿಕ್ಷಕರಾದ ಡಿ.ಜಿ.ತಿರುಮಲ, ಗೋವಿಂದಪ್ಪ, ಆರ್.ಪಿ.ಮಂಜುನಾಥ್ ಇತರರಿದ್ದರು.
Published on

ಬಳ್ಳಾರಿ : ಸಂಗೀತ, ಚಿತ್ರಕಲಾ, ರಂಗ ಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಎಐಡಿವೈ ಯುವಜನ ಸಂಘಟನೆ ನೇತೃತ್ವದಲ್ಲಿ ಚಿತ್ರ ಬಿಡಿಸುವ ಮತ್ತು ಹೋರಾಟದ ಹಾಡು ಹಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಸಂಘಟನೆ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಆಡಳಿತಾರೂಢ ಸರ್ಕಾರಗಳು ಯಾವುದೇ ಔದ್ಯೋಗಿಕ ನೀತಿಗಳನ್ನು ಜಾರಿಗೆ ತರದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರತಿವರ್ಷ ಕೋಟ್ಯಂತರ ಯುವಜನರು ನಿರುದ್ಯೋಗದ ಪಡೆಗೆ ಸೇರಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಸಂಗೀತ, ಚಿತ್ರಕಲೆ, ನೃತ್ಯ ಮತ್ತು ನಾಟಕ ವಿಷಯಗಳಲ್ಲಿ ಪದವಿಗಳನ್ನು ಪಡೆದವರೂ ಇದ್ದಾರೆ ಎಂದರು.

ಸರ್ಕಾರ ಕಾಯಂ ಹುದ್ದೆಗಳನ್ನು ಭರ್ತಿ ಮಾಡದೆ ಗುತ್ತಿಗೆ ಆಧಾರದಲ್ಲಿ ಅಥವಾ ಅತಿಥಿಗಳ ರೂಪದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಅವರಿಗೆ ಸಿಗುವ ಸಂಬಳವೂ ಕಡಿಮೆ. ಈ ಕನಿಷ್ಟ ವೇತನದಲ್ಲಿ ಇಂದಿನ ದುಬಾರಿ ಬೆಲೆ ಏರಿಕೆಯ ಬಿಸಿಗೆ ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ. ಇದರಿಂದ ಅವರು ಮಾನಸಿಕ ಜರ್ಜರಿತರಾಗುತ್ತಿದ್ದಾರೆ. ಆದ್ದರಿಂದ ಈ ಎಲ್ಲ ಶಿಕ್ಷಕರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಒಟ್ಟು 5,240 ಸರ್ಕಾರಿ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲ ಸಹಪಠ್ಯ ವಿಷಯಗಳ ಒಟ್ಟು ಬೋಧಕರ ಸಂಖ್ಯೆ 1500 ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನು ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. 2008-09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದುವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022-23ರಲ್ಲಿ ಕ್ರೈಸ್ ಅಡಿಯಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ ಇನ್ನು ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಮಿದುಳಿಗೆ ಮಾಹಿತಿ ತುಂಬುವುದಲ್ಲ. ಬದಲಿಗೆ ಚಾರಿತ್ರ್ಯ ನಿರ್ಮಿಸುವುದು. ಮಕ್ಕಳಿಗೆ ಭಾಷೆ ಜತೆಗೆ ಸಂಗೀತ, ಚಿತ್ರಕಲೆ, ರಂಗಕಲೆ ಅವಶ್ಯಕವಾಗಿವೆ. ಆ ಮೂಲಕ ಮಾತ್ರವೇ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ಮಕ್ಕಳ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವುಗಳು ತುಂಬಾ ಅವಶ್ಯಕ. ಅದನ್ನು ಗಂಭೀರವಾಗಿ ಪರಿಗಣಿಸಿಯೇ ಶಿಕ್ಷಣ ತಜ್ಞರು ಪ್ರೌಢ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮತ್ತು ತರಬೇತಿ ಸಿಗಲೆಂದು ಈ ಕಲೆಗಳಲ್ಲಿ ಪರಿಣಿತಿ ಹೊಂದಿದ ಶಿಕ್ಷಕರ ನೇಮಕಾತಿಗೆ ಶಿಫಾರಸು ಮಾಡಿದ್ದಾರೆ. ಆದ್ದರಿಂದ ಸಂಗೀತ, ಚಿತ್ರಕಲೆ ಮತ್ತು ರಂಗ ಕಲೆಗಳಲ್ಲಿ ಪದವಿ ಪಡೆದವರ ನೇಮಕಾತಿಗಾಗಿ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎ.ಪಂಪಾಪತಿ ಕೋಳೂರು, ಚಿತ್ರಕಲಾ, ಸಂಗೀತ ಮತ್ತು ರಂಗಕಲಾ ಶಿಕ್ಷಕರಾದ ಡಿ.ಜಿ.ತಿರುಮಲ, ಗೋವಿಂದಪ್ಪ, ಆರ್.ಪಿ.ಮಂಜುನಾಥ್, ಬಿ.ಜಿ.ದಿನ್ನೆ, ಅಂಬಣ್ಣ ನಾಯಕ್, ಚಂದ್ರು ಬಸಾಪುರ, ಮಲ್ಲಿಕಾರ್ಜುನ, ಹೇಮೇಶ್ವರ್, ಹುಲಿಯಪ್ಪ, ವಿಷ್ಣು ಹಡಪದ್, ಎಂ,ನರೇಂದ್ರ, ಶಿವರಾಜ, ಬಸವರಾಜ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net