

ದೇವನಹಳ್ಳಿ: ಜಿಲ್ಲೆಯ ಲಿಂಕ್ ರಸ್ತೆಗಳ ಅಭಿವೃದ್ಧಿಗೆ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯ(ಪಿಎಂಜಿಎಸ್‌ವೈ) 3ನೇ ಹಂತದ ಸಂಸದರ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.
ದೇವನಹಳ್ಳಿಯ ಬೊಮ್ಮನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ,
ಜಿಲ್ಲೆಯ ನಾಲ್ಕು ತಾಲೂಕಿನ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು, ದೇವನಹಳ್ಳಿ ತಾಲೂಕಿನಲ್ಲಿ 14.42 ಕೋಟಿ ವೆಚ್ಚದ 22 ಕಿಮೀ ನಾಲ್ಕು ಲಿಂಕ್ ರಸ್ತೆಗಳ ಅಭಿವೃದ್ಧಿ, ಹೊಸಕೋಟೆ ತಾಲೂಕಿನ 16.36 ಕೋಟಿ ರೂ. ವೆಚ್ಚದ 29 ಕಿ.ಮೀ ರಸ್ತೆ, ದೊಡ್ಡಬಳ್ಳಾಪುರ ತಾಲೂಕಿನ 15.73 ಕೋಟಿ ರೂ. ವೆಚ್ಚದಲ್ಲಿ 23 ಕಿಮೀ ರಸ್ತೆ, ನೆಲಮಂಗಲ ತಾಲೂಕಿನ 12.71 ಕೋಟಿ ರೂ. ವೆಚ್ಚದಲ್ಲಿ 23 ಕಿಮೀ ರಸ್ತೆ ಕಾಮಗಾರಿಗೆ ಟೆಂಡರ್ ಮಾಡಲಾಗಿದೆ. 5 ವರ್ಷಗಳ ಕಾಲ ಕಂಟ್ರಾಕ್ಟರ್‌ಗಳೇ ರಸ್ತೆಯ ನಿರ್ವಹಣೆ ಮಾಡಬೇಕು ಎಂದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಗ್ರಾಮಗಳಲ್ಲಿ ಶಾಸಕರ ಅನುದಾನದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ಮಾಡಲಾಗಿದ್ದು, ತೀರಾ ಹದಗೆಟ್ಟಿರುವ ಕೆಲವು ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಮುಖ ರಸ್ತೆಗಳಿಗೆ ಲಿಂಕ್ ಪಡೆದಿರುವ ರಸ್ತೆಗಳ ಅಭಿವೃದ್ಧಿಗೆ ಸಂಸದರು ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಬಮುಲ್ ನಿರ್ದೇಶಕ ಬಿ.ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಮುಖಂಡರಾದ ಬಿ.ಮುನೇಗೌಡ, ಆರ್.ಮುನೇಗೌಡ, ಬಿ.ರಾಜಣ್ಣ, ಎ.ಚಿನ್ನಪ್ಪ, ತಾಪಂ ಅಧ್ಯಕ್ಷೆ ಶಶಿಕಲಾ ಆನಂದ್, ಇಂಜಿನಿಯರ್ ವಿಶ್ವನಾಥ್, ಗುತ್ತಿಗೆದಾರ ದೇವರಾಜ್, ಮತ್ತಿತರರು ಇದ್ದರು.