ಬೋಧನೆಗೆ ಒತ್ತು ನೀಡಿ-ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ; ಅಧಿಕಾರಿಗಳಿಗೆ ಉಜ್ವಲ್ಕುಮಾರ ಘೋಷ್ ಸೂಚನೆ

INCHARGE SECRETORY MEETIN
ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಎಎಸ್‌ಪಿ ಶಂಕರ ಮಾರಿಹಾಳ ಇದ್ದಾರೆ.
Published on

ವಿಜಯಪುರ: ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಇಂತಹ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ, ಪರಿಹಾರ ಬೋಧನೆ ಮಾಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ವಹಿಸಬೇಕು. ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕು ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಜವಾಬ್ದಾರಿ ಹಾಗೂ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ಭವಿಷ್ಯದಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ, ಮಕ್ಕಳ ದಾಖಲೆಗಳಲ್ಲಿ ಯಾವುದೇ ಲೋಪವಾಗದಂತೆ ಪ್ರಾಥಮಿಕ ಹಂತದಲ್ಲಿಯೇ ನೋಡಿಕೊಳ್ಳಬೇಕು. ಶಾಲಾ ದಾಖಲಾತಿ ಹಾಗೂ ಆಧಾರ ದಾಖಲಾತಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ದಾಖಲಾತಿಯೊಂದಿಗೆ ಆಧಾರ್ ಸೀಡಿಂಗ್ ಪ್ರಗತಿಯನ್ನು ಹೆಚ್ಚಿಸಬೇಕು. ಸಮಸ್ಯೆಗಳಲಿದ್ದಲ್ಲಿ ತಕ್ಷಣವೇ ಪರಿಹರಿಸಿಕೊಂಡು ಯಾವುದೇ ಮಗುವಿನ ದಾಖಲೆಗಳಲ್ಲಿ ವ್ಯತ್ಯಾಸವಾಗದಂತೆ ಮುತುವರ್ಜಿ ವಹಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಸೂಕ್ತ ಮಾರ್ಗದರ್ಶನ ಒದಗಿಸಬೇಕು. ಮಕ್ಕಳ ಭವಿಷ್ಯದ ಕಾರ್ಯವಾಗಿರುವುದರಿಂದ ಈ ಕಾರ್ಯದಲ್ಲಿ ಯಾವುದೇ ಅಧಿಕಾರಿಗಳು ನಿರ್ಲಕ್ಷೃ ವಹಿಸಬಾರದು. ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ದಾಖಲಿಕರಣಗೊಳಿಸುವಂತೆ ಅವರು ಸೂಚನೆ ನೀಡಿದರು.

ಕುಡಿಯುವ ನೀರಿನ ಅಭಾವವಾಗದಂತೆ ಈಗಿನಿಂದಲೇ ಮುಂಜಾಗ್ರತೆ ವಹಿಸಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬಯೋಲಾಜಿಕಲ್ ಮತ್ತು ಕೆಮಿಕಲ್ ಪರೀಕ್ಷೆಯನ್ನು ನಿಯಮಿತವಾಗಿ ಕೈಗೊಂಡು ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು. ಶಾಲೆ, ಅಂಗನವಾಡಿ, ವಸತಿ ನಿಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಅವಶ್ಯಕತೆ ಇರುವ ಕಡೆ ಪರಿಶೀಲನೆ ನಡೆಸಿ ನೀರು ಪೂರೈಸಲು ಸೂಚಿಸಲಾಗಿದ್ದರ ಮೇರೆಗೆ ಮತ್ತೊಮ್ಮೆ ಕೂಲಂಕೂಷವಾಗಿ ಪರಿಶೀಲನೆ ನಡೆಸಿ ಸಂಪರ್ಕ ಒದಗಿಸದೇ ಇರುವ ಸ್ಥಳಗಳನ್ನು ಖಚಿತಪಡಿಸಿಕೊಂಡು ಆದ್ಯತೆ ಮೇಲೆ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಶಾಲೆಗಳಲ್ಲಿ ಶೌಚಗೃಹ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಂಡು ಖಚಿತಪಡಿಸಿಕೊಳ್ಳಲು ಈಗಾಗಲೇ ಜಂಟಿ ಸರ್ವೇ ನಡೆಸಲು ಸೂಚಿಸಲಾಗಿತ್ತು. ಆ ವರದಿ ಆಧರಿಸಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜೆಜೆಎಂ ಯೋಜನೆಯ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನ ನಿಗದಿತ ಅವಧಿಯಲ್ಲಿ ಸಾಧಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಯಾವುದೇ ಅರ್ಹ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ವಿಳಂಬ ಮಾಡದೇ ಅರ್ಜಿ ಇತ್ಯರ್ಥ ಪಡಿಸಿ ಶಿಷ್ಯವೇತನ ಒದಗಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಬೇಕು. ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ನಿರಂತರ ಫಾಲೋಅಪ್ ಮಾಡಬೇಕು. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಇ-ಆಫೀಸ್ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ ಜಿಲ್ಲೆಯ ಸರ್ಕಾರಿ ಕಟ್ಟಡದ ಮೇಲ್ಛಾವಣಿಯಲ್ಲಿ ಸೋಲಾರ್ ಅಳವಡಿಕೆಗೆ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ, ಮಾದರಿ ಸೌರ ಗ್ರಾಮ, ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (ಕುಸುಮಬಿ) ಯೋಜನೆ ಕುರಿತು ಹೆಸ್ಕಾಂ ಅಭಿಯಂತರ ಸಿದ್ದಪ್ಪ ಬಿಂಜಗೇರಿ ಪಿಪಿಟಿ ಮೂಲಕ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಎಎಸ್‌ಪಿ ಶಂಕರ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವಾಣ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net