

ಸಾಗರ: ಮುಂದಿನ 10 ವರ್ಷಗಳಲ್ಲಿ ಅರಣ್ಯ ಇಲಾಖೆ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜತೆಗೆ ಅರಣ್ಯ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವಂತೆ ಒತ್ತಾಯಿಸಿ ಗುರುವಾರ ವೃಕ್ಷಲಕ್ಷ ಆಂದೋಲನದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹಾಲಿ ಹತ್ತು ವರ್ಷಗಳಿಗೆ ರೂಪಿಸಿರುವ ಕಾರ್ಯಯೋಜನೆಯಲ್ಲಿ ಅಗತ್ಯ ಬದಲಾವಣೆ ತರಬೇಕು. ವಕ್ಷಲಕ್ಷ ಆಂದೋಲನಾ ಸೇರಿದಂತೆ ವಿವಿಧ ಪರಿಸರ ಸಂಘಟನೆಗಳು ಈವರೆಗೆ ಅರಣ್ಯ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಪಶ್ಚಿಮಘಟ್ಟ ಪ್ರದೇಶದಲ್ಲಿ ಅರಣ್ಯ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು. ಭೂಕುಸಿತ ಪ್ರದೇಶದಲ್ಲಿ ನಡುತೋಪುಗಳನ್ನು ಕಟಾವು ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಏಕಜಾತಿ ನಡುತೋಪುಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು ಒತ್ತಾಯಿಸಿದರು.
ಅಭಯಾರಣ್ಯಗಳ ಸುತ್ತಲಿನ ಪ್ರದೇಶಗಳಲ್ಲಿ ನೈಸರ್ಗಿಕ ಕಾಡು ರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು. ಕಾಡು ಜೇನಿನ ರಕ್ಷಣೆಗೆ ವಿಶೇಷವಾದ ಒತ್ತು ನೀಡಬೇಕು. ವಿನಾಶದ ಅಂಚಿನಲ್ಲಿರುವ ಮರ, ಬಳ್ಳಿಗಳ ಉಪ ಉತ್ಪನ್ನಗಳ ಸಂಗ್ರಹಣೆಗೆ ಅವಕಾಶ ನೀಡಬಾರದು. ಕರಾವಳಿಯಲ್ಲಿ ಕಾಂಡ್ಲಾ ಗಿಡಗಳು, ಅಳಿವೆಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಸ್ವಾಭಾವಿಕ ಅರಣ್ಯ ಸಂರಕ್ಷಣೆ ಅರಣ್ಯ ಇಲಾಖೆಯೇ ನಿರ್ವಹಿಸಬೇಕು. ಅರಣ್ಯ ಸಂರಕ್ಷಣಾ ಕಾರ್ಯಗಳ ಮೌಲ್ಯಮಾಪನಾ ಸಮಿತಿ ವಸ್ತುನಿಷ್ಠ ವರದಿಯನ್ನು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಹಿರಿಯ ಅಕಾರಿಗಳು ಅಗತ್ಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಡುತೋಪು ಕಟಾವಾಗಿರುವ ಸ್ಥಳಗಳಿಗೆ ಬೆಂಕಿ ಹಾಕುವ ಪದ್ಧತಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪ್ರಮುಖರಾದ ಕೆ.ವೆಂಕಟೇಶ್, ಆರ್.ಎಸ್.ಗಿರಿ, ಆನೆಗೊಳಿ ಸುಬ್ರಾವ್, ಶ್ರೀಪಾದ ಬಿಚ್ಚುಗತ್ತಿ, ಕುಮಾರಸ್ವಾಮಿ, ಅಶೋಕ, ಎಂ.ಆರ್.ಪಾಟೀಲ್ ಇತರರಿದ್ದರು.