ಲೋಕಸಭೆ ಚುನಾವಣೆಗೆ ಒತ್ತು: ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಹೇಳಿಕೆ

BLY- 27-4
Published on

ಬಳ್ಳಾರಿ : ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಬಳ್ಳಾರಿಗೆ ಭಾನುವಾರ ಆಗಮಿಸಿದ ರಾಜ್ಯಸಭೆ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಳ್ಳಾರಿ ನಗರದಲ್ಲಿ ಭರ್ಜರಿ ಮೆರವಣಿಗೆಯೊಂದಿಗೆ ಅಭಿಮಾನಿಗಳು ಸ್ವಾಗತ ಮಾಡಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಈ ಭಾಗದಿಂದ ಅತಿ ಹೆಚ್ಚು ಸಂಸದರನ್ನು ಆರಿಸಿ ಕಳುಹಿಸುತ್ತೇವೆ. ಅತಿ ಕಿರಿಯ ವಯಸ್ಸಿನಲ್ಲಿ ನನ್ನನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಿರೋದಕ್ಕೆ ಧನ್ಯವಾದಗಳು ಎಂದರು.

ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದ ನನಗೆ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ನೀಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಏಳು ಸ್ಥಾನವನ್ನು ಗೆದ್ದಿದ್ದೇವೆ. ಲೋಕಸಭೆಯಲ್ಲಿಯೂ ಅದೇ ರೀತಿ 28 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ. ಕಲ್ಯಾಣ ಕರ್ನಾಟಕ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಅಥವಾ ವಲಸಿಗರಿಗೆ ಟಿಕೆಟ್ ನೀಡುವುದು ಪಕ್ಷಕ್ಕೆ ಬಿಟ್ಟಿರುವ ವಿಚಾರ. ಯಾರಿಗೆ ಟಿಕೆಟ್ ನೀಡುತ್ತಾರೋ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು. ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸಲು ಸಿದ್ಧ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಶಾಸಕ ನಾರಾ ಭರತ್‌ರೆಡ್ಡಿ, ಮೇಯರ್ ಡಿ.ತ್ರಿವೇಣಿ, ಮುಖಂಡ ಬೋಯಪಾಟಿ ವಿಷ್ಣುವರ್ಧನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net