

ಹನೂರು : ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಹನೂರು ಶೈಕ್ಷಣಿಕ ವಲಯ ಪ್ರಥಮ ಸ್ಥಾನ ಗಳಿಸಬೇಕು. ಇದಕ್ಕೆ ಪ್ರತಿಯೊಬ್ಬರೂ ಅಗತ್ಯ ಕ್ರಮವಹಿಸಬೇಕು ಎಂದು ಬಿಇಒ ಗುರುಲಿಂಗಯ್ಯ ತಿಳಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಗಣಿತ ಹಾಗೂ ಕನ್ನಡ ಶಿಕ್ಷಕರಿಗೆ ಆಯೋಜಿಸಿದ್ದ ವಿಷಯಾಧಾರಿತ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ವಲಯದ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಅವಲೋಕಿಸಿದಾಗ 8 ವರ್ಷಗಳಿಂದಲೂ ಹನೂರು ವಲಯ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿತ್ತು. ರಾಜ್ಯ ಮಟ್ಟದಲ್ಲೂ ಉತ್ತಮ ಸ್ಥಾನದಲ್ಲಿತ್ತು. ಆದರೆ ಕಳೆದ ಬಾರಿಯ ಫಲಿತಾಂಶದಲ್ಲಿ ಕೊನೇ ಸ್ಥಾನ ತಲುಪಿರುವುದು ಬೇಸರದ ಸಂಗತಿ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಆತ್ಮವಲೋಕನಾ ಮಾಡಿಕೊಳ್ಳಬೇಕಿದೆ. ಕೆಲವು ಬದಲಾವಣೆಗಳು ಆಗಬೇಕಿದೆ. ಈ ದೆಸೆಯಲ್ಲಿ ವಿಷಯಾವಾರು ಶಿಕ್ಷಕರು ಆರಂಭಿಕ ಹಂತದಲ್ಲೇ ಮಕ್ಕಳ ಮಾನಸಿಕ ಸಾಮರ್ಥ್ಯ ಹಾಗೂ ಆಸಕ್ತಿಯನ್ನು ಅರಿತು ಒತ್ತಡ ಉಂಟಾಗದಂತೆ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅವರ ಬುದ್ಧಿಶಕ್ತಿಗೆ ಅನುಗುಣವಾಗಿ ತರಗತಿಯಲ್ಲಿ ಕಲಿಕಾ ಪೂರಕ ಚಟುವಟಿಕೆಗಳ ಜತೆಗೆ ಬೋಧನೆಯನ್ನು ಕೈಗೊಳ್ಳಬೇಕು. ಅಭ್ಯಾಸ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ಉತ್ತಮ ಫಲಿತಾಂಶಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು.
ಬಳಿಕ ಪಠ್ಯಕ್ರಮ, ಬೋಧನಾ ವಿಧಾನ, ಕಲಿಕೆಯ ಕ್ರಮ, ನೀಲಿ ನಕಾಶೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ಇನ್ನಿತರ ವಿಷಯ ಕುರಿತು ಸಂಪನ್ಮೂಲ ಶಿಕ್ಷಕರು ವಿಷಯ ಮಂಡನೆ ಮಾಡಿದರು.
ಶಿಕ್ಷಣ ಸಂಯೋಜಕ ಅಶೋಕ್, ಪ್ರಭಾರ ಬಿಆರ್‌ಸಿ ವೆಂಕಟೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಭಾರ ಅಧ್ಯಕ್ಷ ಚಂದ್ರಶೇಖರಯ್ಯ, ಕಾರ್ಯದರ್ಶಿ ಪ್ರದೀಪ್, ಸಂಪನ್ಮೂಲ ಶಿಕ್ಷಕರಾದ ಜಯಶಂಕರ್, ಶ್ರೀನಿವಾಸನಾಯ್ಡು, ಕಿರಣ್‌ಕುಮಾರ್, ಕಂದವೇಲು, ಲಿಂಗಯ್ಯ, ಮಲ್ಲೇಶ್ ಇನ್ನಿತರರು ಇದ್ದರು.