ಆರೋಗ್ಯ ಪೂರ್ಣ ಜೀವನಕ್ಕೆ ಒತ್ತು

HUN-JUNE-5-1(WORLD ENVIRONMENT DAY)
ಹುಣಸೂರು ನಗರದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಟಿ.ಗೋವಿಂದಯ್ಯ ಸಸಿ ನೆಟ್ಟರು. ಜೈಬುನ್ನಿಸಾ, ಬಿ.ವೈ.ಮನುಪಟೇಲ್ ಶಿವಣ್ಣೇಗೌಡ, ಎಸ್.ರೇವಣ್ಣ, ಪಿ.ಎ.ಸೀಮಾ ಇದ್ದರು.
Published on

ಹುಣಸೂರು: ಅರಣ್ಯ ನಾಶದಿಂದ ಜೀವಸಂಕುಲವೇ ನಾಶವಾಗುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದು, ಯುವಕರು ಮತ್ತು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯತ್ತ ಹೆಜ್ಜೆ ಇಡಬೇಕೆಂದು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ ಸಲಹೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಬುಧವಾರ 10 ಸಾವಿರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ನಾಶವನ್ನು ತಡೆಯಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಆ ನಿಟ್ಟಿನಲ್ಲಿ ದುಡಿಯವ ಮನಸ್ಥಿತಿಯಲ್ಲಿ ನಾವ್ಯಾರೂ ಇಲ್ಲ. ಪರಿಸರ ನಾಶದಿಂದ ಮನುಕುಲ ಮಾತ್ರವಲ್ಲ ಇಡೀ ಜೀವಸಂಕುಲವೇ ನಾಶವಾಗಲಿದೆ. ಈಗ ಹಣ ತೆತ್ತು ನೀರನ್ನು ಪಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗಾಳಿಯನ್ನು ಹಣ ತೆತ್ತು ಉಸಿರಾಡುವ ಪರಿಸ್ಥಿತಿ ಎದುರಾದರೂ ಆಶ್ಚರ್ಯ ಪಡಬೇಕಿಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳು ಸರ್ಕಾರಿ ಜಾಗ ಮತ್ತು ಶಾಲಾ ಆವರಣದಲ್ಲಿ ಮಾತ್ರ ಗಿಡ ನೆಟ್ಟರೆ ಸಾಲದು. ಬದಲಾಗಿ ಮನೆ ಆವರಣದಲ್ಲಿ ಗಿಡ ನೆಟ್ಟು ಪೋಷಿಸಿ ಬೆಳೆಸಬೇಕು. ಆ ಮೂಲಕ ಪರಿಸರ ಸಮತೋಲನ ಕಾಯ್ದುಕೊಂಡು ಆರೋಗ್ಯ ಪೂರ್ಣ ಜೀವನ ನಡೆಸಬೇಕು ಎಂದರು.

ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗದ ಡಿಸಿಎಫ್ ಪಿ.ಎ.ಸೀಮಾ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಆಂಗವಾಗಿ ಇಲಾಖೆ ಜನವನ, ಒಬ್ಬರಿಗೊಂದು ಮರ ಘೋಷವಾಕ್ಯದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ತಾಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುವುದು ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಟೇಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ. ಎಸಿಎಫ್ ಎಂ.ಮಹದೇವಯ್ಯ, ಆರ್‌ಎಫ್‌ಒ ಎಚ್.ವಿ.ನಂದಕುಮಾರ್, ರುದ್ರೇಶ್ ಮತ್ತು ಆದಿಚುಂಚನಗಿರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net