ಮೈಸೂರಿನಲ್ಲಿ ಫುಟ್‌ಪಾತ್ ಒತ್ತು ‘ವರಿ’

15-4-768x471
Published on

ಆರ್.ಕೃಷ್ಣ ಮೈಸೂರು
ಪ್ರವಾಸಿತಾಣವಾದ ನಗರದಲ್ಲಿ ದಿನದಿಂದ ಫುಟ್‌ಪಾತ್ ಒತ್ತುವರಿ ಹಾವಳಿ ಹೆಚ್ಚಾಗಿ ಪಾದಚಾರಿಗಳು, ವಾಹನ ಸವಾರರಿಗೆ ಅಡ್ಡಿಯುಂಟಾಗುತ್ತಿದೆ.
ಆಗಾಗ್ಗೆ ನಗರ ಪೊಲೀಸರು, ನಗರಪಾಲಿಕೆ ಕಾರ್ಯಾಚರಣೆ ನಡೆಸಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿದರೂ ಅದು ತಾತ್ಕಾಲಿಕವಾಗುತ್ತಿದೆ. ಫುಟ್‌ಪಾತ್ ವ್ಯಾಪಾರಿಗಳು ಮತ್ತೆ, ಮತ್ತೆ ಅದೇ ಜಾಗ ಆಕ್ರಮಿಸಿಕೊಳ್ಳುವುದರಿಂದ ಸಮಸ್ಯೆ ನಿರಂತರವಾಗಿದೆ.
ಅಲ್ಲದೇ ವ್ಯಾಪಾರಸ್ಥರು ಗ್ರಾಹಕರನ್ನು ಆಕರ್ಷಿಸಲು ವಸ್ತುಗಳನ್ನು ಫುಟ್‌ಪಾತ್‌ನಲ್ಲಿಯೇ ಪ್ರದರ್ಶನಕ್ಕಿಡುವುದು ಸಾಮಾನ್ಯವಾಗಿ ಹೋಗಿದೆ. ನಗರದ ಹೃದಯಭಾಗ ಎನ್ನುವ ಚಿಕ್ಕಗಡಿಯಾದ ಸುತ್ತಮುತ್ತ, ಸಯ್ಯಜಿರಾವ್ ರಸ್ತೆಯ ಇಕ್ಕೆಲ, ವಿನೋಬಾ ರಸ್ತೆ, ಹಳೇ ಬ್ಯಾಂಕ್ ರಸ್ತೆ, ಅರಮನೆ ಸುತ್ತ, ಮಂಡಿ ಮೊಹಲ್ಲಾ, ಗಾಂಧಿ ಚೌಕ, ಮಕ್ಕಾಜಿ ಚೌಕ, ಶಿವರಾಂಪೇಟೆ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಒಲಿಂಪಿಯಾ ಚಿತ್ರಮಂದಿರದ ಸುತ್ತಮುತ್ತ ಸೇರಿದಂತೆ ನಗರದ ಹಲವು ಕಡೆ ಫುಟ್‌ಪಾತ್ ಒತ್ತುವರಿ ಮಾಮೂಲಿ ಎನ್ನುವಂತಾಗಿದೆ.
ದಂಡ ಪ್ರಯೋಗಕ್ಕೂ ಜಗ್ಗುತ್ತಿಲ್ಲ:
ಫುಟ್‌ಪಾತ್ ಒತ್ತುವರಿಯಿಂದ ಸಾರ್ವಜನಿಕರಿಗೆ ಅಗುತ್ತಿರುವ ತೊಂದರೆಯನ್ನು ಮನಗಂಡು ನಗರಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದರು. ಅಲ್ಲದೇ ಪದೆ ಪದೇ ಒತ್ತುವರಿ ಮಾಡುವ ವ್ಯಾಪಾರಸ್ಥರಿಗೆ ದಂಡ ಪ್ರಯೋಗವನ್ನು ಮಾಡಿದ್ದರು.
ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಾ ಅಂಗಡಿಗಳು ತಲೆ ಎತ್ತಿರುವ ಕಾರಣ ಸಾರ್ವಜನಿಕರು ಫುಟ್‌ಪಾತ್ ಬಿಟ್ಟು ರಸ್ತೆಗಿಳಿಯುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಫುಟ್‌ಪಾತ್ ತೆರವುಗೊಳಿಸಬೇಕು ಎಂದು ನಗರಪಾಲಿಕೆಯಲ್ಲಿ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ. ಆದರೂ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.
ಸಯ್ಯಜಿ ರಾವ್ ರಸ್ತೆ, ಅರಮನೆ ಸುತ್ತಲ ರಸ್ತೆಯ ಫುಟ್‌ಪಾತ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವ 60ಕ್ಕೂ ಹೆಚ್ಚು ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು. ಅಲ್ಲದೇ ಎರಡನೇ ಹಂತದಲ್ಲಿ ದಂಡವನ್ನು ವಿಧಿಸಲಾಗಿತ್ತು. ಆದರೆ ಈ ತೆರವು ಕಾರ್ಯಾಚರಣೆ ಕೇವಲ ಒಂದಷ್ಟು ದಿನಗಳಿಗೆ ಮಾತ್ರ ಸೀಮಿತವಾಗುತ್ತಿದ್ದು, ಮತ್ತೆ ಅದೇ ಸನ್ನಿವೇಶ ಮುಂದುವರಿಯುತ್ತಿದೆ. ಹಾಗಾಗಿ ಫುಟ್‌ಪಾತ್ ಅತಿಕ್ರಮಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಅರಮನೆ ಸೇರಿದಂತೆ ಮೃಗಾಲಯ ಸುತ್ತ-ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಫುಟ್‌ಪಾತ್ ಅತಿಕ್ರಮಣವಾಗಿರುವುದು ಶೋಭೆ ತರುವುದಿಲ್ಲ. ಅಲ್ಲದೇ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಅಡ್ಡಿಯಾಗುವಂತೆ ಅನಧಿಕೃತ ವ್ಯಾಪಾರ ನಡೆಸಲಾಗುತ್ತಿರವು ಫುಟ್‌ಪಾತ್ ತೆರವುಗೊಳಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಗ್ಯಾರೇಜ್‌ಗಳ ಅಕ್ರಮಣ
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಣ್ಣದಕೇರಿ ಫುಟ್‌ಪಾತ್ ಸೇರಿದಂತೆ ರಸ್ತೆಗಳನ್ನೆಲ್ಲ ಗ್ಯಾರೇಜ್‌ಗಳು ಆಕ್ರಮಿಸಿ ಕೊಂಡಿರುವುದರಿಂದ ಪಾದಚಾರಿಗಳು ಪರದಾಡುವ ಪರಿಸ್ಥಿತಿ ಇದೆ. ವಾಹನ ರಿಪೇರಿಗೆ ಬರುವ ದ್ವಿಚಕ್ರ ವಾಹನಗಳು ಗ್ಯಾರೇಜ್ ಮಾಲೀಕರು ರಸ್ತೆಯಲ್ಲೇ ನಿಲ್ಲಿಸಬೇಕಿದೆ. ಫುಟ್‌ಪಾತ್ ಬಳಿ ಕೂಡ ತಮ್ಮ ವಾಹನವು ನಿಲ್ಲಿಸಿ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚಾರ ಮಾಡುವ ಸವಾರರಿಗೆ ಕಂಟಕವಾಗಿದೆ.
ಫುಟ್‌ಪಾತ್ ಹಾಗೂ ರಸ್ತೆಯನ್ನು ಕೂಡ ಆಕ್ರಮಿಸಿಕೊಂಡಿರುವ ಗ್ಯಾರೇಜ್ ಮಾಲೀಕರು ಯಾವುದಕ್ಕೂ ಜಗ್ಗದೆ ಕೆಲಸ ಮಾಡುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕು. ಅಲ್ಲೂ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ತೊಂದರೆಯಾಗುತ್ತಿದೆ. ಅತಿ ವೇಗವಾಗಿ ಹೋಗುವ ವಾಹನಗಳಿಂದ ಸಾರ್ವಜನಿಕರಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎನ್ನುವ ಮನವಿ ಇದೆ. ನಂಜುಮಳಿಗೆ, ಫೈವ್‌ಲೈಟ್ ವೃತ್ತದಲ್ಲಿಯೂ ಹಣ್ಣು, ತರಕಾರಿ ಮಾರಾಟಗಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗ್ಗೆ, ಸಂಜೆ ವೇಳೆ ಈ ಸ್ಥಳದಲ್ಲಿ ವಾಹನ ಸಂಚಾರ, ಪಾದಚಾರಿಗಳ ಓಡಾಡಕ್ಕೆ ಅಡ್ಡಿಯಾಗುತಿದೆ.

ರಾಜಕಾರಣಿಗಳ ಪ್ರಭಾವ:

ಸಾರ್ವಜನಿಕರಿಗೆ ತೊಂದರೆಯಾಗುವಂತೆ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರಿಗೆ ರಾಜಕಾರಣಿಗಳ ಪ್ರಭಾವವೂ ಇದೆ. ಸಂಚಾರಕ್ಕೆ ಅಡ್ಡಿಯಾಗುವಂತೆ ವ್ಯಾಪಾರ ಮಾಡುವವರನ್ನು ತೆರವುಗೊಳಿಸಿದರೆ ರಾಜಕಾರಣಿಗಳು, ಪ್ರಭಾವಿಗಳು ಮಧ್ಯೆ ಪ್ರವೇಶಿಸಿ ಅವರ ರಕ್ಷಣೆಗೆ ನಿಲ್ಲುತ್ತಿದ್ದಾರೆ. ಹೀಗಾಗಿ ಫುಟ್‌ಪಾತ್ ತೆರವುಗೊಳಿಸಿದರೂ ಕೆಲ ದಿನಗಳಲ್ಲಿಯೇ ಮತ್ತೆ ಅತಿಕ್ರಮಣ ಮಾಡಿಕೊಳ್ಳಲಾಗುತ್ತಿದೆ.

ಕಾರ್ಯಾಚರಣೆ ನಡೆಯಲಿದೆ
ನಗರಪಾಲಿಕೆಯಿಂದ ಈಗಾಗಲೇ ಹಲವು ಬಾರಿ ಎಚ್ಚರಿಕೆಯನ್ನು ನೀಡಿರುವುದಲ್ಲದೇ ದಂಡವನ್ನು ವಿಧಿಸಿ ಪುಟ್‌ಪಾತ್ ತೆರವು ಮಾಡಲಾಗಿದೆ. ಆದರೂ ಮತ್ತೆ ಅತಿಕ್ರಮಣ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಎಚ್ಚರಿಕೆ ನೀಡಿ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಯಲಿದೆ.
ಡಾ.ಎನ್.ಎನ್.ಮಧು
ಆಯುಕ್ತರು, ನಗರಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net