

ನಂಜನಗೂಡು: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಎಲ್ಲರೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಸಲಹೆ ನೀಡಿದರು.
ತಾಲೂಕಿನ ಹಳೇಪುರ ಗ್ರಾಮದಲ್ಲಿ ಶನಿವಾರ ಶ್ರೀನಿವಾಸ್ ಪ್ರಸಾದ್, ಆರ್.ಧ್ರುವನಾರಾಯಣ, ಕೆ.ಶಿವರಾಂ ವೇದಿಕೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕರಾದ ಶ್ರೀನಿವಾಸ್ ಪ್ರಸಾದ್, ಧ್ರುವನಾರಾಯಣ, ಕೆ.ಶಿವರಾಂ ಅವರು ಸಮುದಾಯಕ್ಕಾಗಿ ದುಡಿದಿದ್ದಾರೆ. ಸಮುದಾಯಕ್ಕೆ ಜನಪ್ರತಿನಿಧಿಗಳು ಹೆಚ್ಚಿನ ಕೆಲಸ ಮಾಡಿದಾಗ ಮಾತ್ರ ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಮುದಾಯಕ್ಕೆ ದುಡಿಯಬೇಕು. ಅಧಿಕಾರ ಸಿಗುವುದು ಮುಖ್ಯವಲ್ಲ, ಅಧಿಕಾರ ಸಿಕ್ಕಾಗ ಅದನ್ನು ಬಳಸಿಕೊಂಡು ಜನಾಂಗಕ್ಕೆ ಕೆಲಸ ಮಾಡಿದಾಗ ಅಧಿಕಾರಕ್ಕೆ ಒಂದು ಘನತೆ ಬರುತ್ತದೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು. ಪ್ರತಿ ದಿನ ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು ಎಂದರು.
ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿ, ಯುವಕರು ವಿದ್ಯಾವಂತರಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಸಮುದಾಯ ಒಗ್ಗೂಡಿ ಆಚರಿಸಿದರೆ ಅವರ ಮಹನೀಯರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆರ್ಥಿಕ, ಶೈಕ್ಷಣಿಕವಾಗಿ ಮಹಿಳೆಯರು ಮುಂದೆ ಬಂದಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಕಾರಣ. ಪ್ರತಿಯೊಬ್ಬರೂ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಈ ದೇಶಕ್ಕೆ ಅಂಬೇಡ್ಕರ್ ಅವರು ಆಸ್ತಿ, ಅವರೇ ನಮಗೆ ಸ್ಫೂರ್ತಿಯಾಗಿದ್ದಾರೆ. ಯಾರು ಕೂಡ ನಮ್ಮ ಇತಿಹಾಸವನ್ನು ಮರೆಯಬಾರದು. ಮನುಷ್ಯ ಮನುಷ್ಯನಾಗಿ ಬಾಳಬೇಕು. ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕನ್ನು ಮಾರಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಹಳೇಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಭವನ ನಿರ್ಮಾಣಕ್ಕೆ ಮುಂದಾಗುತ್ತೇವೆ. ರಸ್ತೆ ದುರಸ್ತಿ, ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿ ಪಡಿಸಲಾಗುವುದು. ಅಂಬೇಡ್ಕರ್ ಭವನದಲ್ಲಿಯೇ ಗ್ರಂಥಾಲಯ ಮಾಡಲು ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ಸಿಲ್ಲದೆ ತೊಂದರೆ ಆಗಿದೆ ಎಂದು ತಿಳಿದು ಬಂದಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಗ್ರಾಮಕ್ಕೆ ಸಮರ್ಪಕವಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಪತ್ರಕರ್ತ ಸಿ.ಎಂ.ಸುಗಂಧರಾಜು, ಬಿಜೆಪಿ ಮುಖಂಡ ಎಚ್.ಆರ್ ರಂಗನಾಥ್, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್.ರಾಜಶೇಖರಮೂರ್ತಿ, ನೇರಳೆ ಗ್ರಾ.ಪಂ ಅಧ್ಯಕ್ಷ ಬಿ.ಆರ್ ಗಿರೀಶ್, ಗ್ರಾಪಂ ಸದಸ್ಯರಾದ ಪುಷ್ಪಾ ನಿರಂಜನ್, ಪ್ರಕಾಶ್, ರೇಖಾ ವಸಂತ, ಗುರುಸ್ವಾಮಿ, ಚಿಕ್ಕತಾಯಮ್ಮ, ಅಂಬೇಡ್ಕರ್ ಯುವಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಎಂ.ಮಹೇಶ್, ಕಾರ್ಯದರ್ಶಿ ಎಚ್.ಬಿ.ಮಹದೇವಸ್ವಾಮಿ, ಮುಖಂಡರಾದ ಮಹದೇವಸ್ವಾಮಿ ಇದ್ದರು.