

ಹುಬ್ಬಳ್ಳಿ: ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿ ಇದೆ. ಆದರೂ ಹು-ಧಾ ಅವಳಿ ನಗರ ಧೂಳು ಮುಕ್ತಕ್ಕೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡುವ ಅಗತ್ಯತೆಯನ್ನು ಒತ್ತಿ ಹೇಳಲಾಗುವುದು ಎಂದು ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಚ್ಛ ನಗರಿಯಾಗಿರುವ ಇಂಧೋರ್‌ಗೆ ನಮ್ಮ ತಂಡ ಭೇಟಿ ನೀಡಿತ್ತು. ಅಲ್ಲಿಯ ಸಾರ್ವಜನಿಕರ ಸಹಭಾಗಿತ್ವವನ್ನು ಕಂಡು ಇಲ್ಲಿಯೂ ಅಳವಡಿಕೆಗೆ ಒತ್ತು ನೀಡಲಾಯಿತು. ಗೋವಾದಲ್ಲಿ ನಾಯಿಗಳ ಹಾವಳಿ ತಡೆಗೆ ಹಾಗೂ ವಧಾಲಯಗಳ ನಿರ್ಮಾಣಕ್ಕೆ ಕೈಗೊಂಡ ಕೆಲಸವನ್ನು ನೋಡಿ ಬೆರಗಾದೆವು. ನಮ್ಮಲ್ಲಿಯೂ ಈ ರೀತಿಯ ಕೆಲಸ ಮಾಡುವ ಉತ್ಸಾಹ ಹೆಚ್ಚಾಗಿದೆ ಎಂದರು.
ಪಾಲಿಕೆಯು ಒಟ್ಟು 4.8 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ, ಸಂಸ್ಕರಣೆ ಮಾಡಲಾಗುತ್ತಿದೆ. ಈಗಾಗಲೇ 3.81 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ಸಂಗ್ರಹಿಸಲಾಗಿದೆ. ಜೈವಿಕ ಅನಿಲ ಸ್ಥಾವರ ಘಟಕಕ್ಕೆ ಶಿವಳ್ಳಿ ಬಳಿ 10 ಎಕರೆ ಭೂಮಿ ಮೀಸಲಿಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಕೇಂದ್ರೀಕೃತ ಕಾಂಪೋಸ್ಟ್ ಘಟಕ ಸ್ಥಾಪಿಸಿದ್ದು, ಭೂ ಸಮೃದ್ಧಿ ಎಂಬ ಬ್ರಾಂಡ್ ಮಾಡಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಬಿಪಿಸಿಎಲ್ ಸಂಸ್ಥೆಗೆ 25 ವರ್ಷ ಉಚಿತ ಲೀಸ್ ನೀಡಲಾಗಿದೆ. ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮದೊಂದಿಗೆ 200 ಟಿಡಿಪಿ ಸಾಮರ್ಥ್ಯದ ವೇಸ್ಟ್ ಟು ಎನರ್ಜಿಯಡಿ ಇದ್ದಿಲು (ಚಾರ್ಕೋಲ್) ತಯಾರಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 2-3 ತಿಂಗಳಲ್ಲಿ ಆರಂಭವಾಗಲಿದೆ ಎಂದರು.
ಬೀದಿ ನಾಯಿಗಳಿಗೆ ಸಂತಾನತಡೆ ಶಸ್ತ್ರಚಿಕಿತ್ಸೆ, ಬೀದಿ ದನಗಳ ಮಾಲೀಕರಿಗೆ ದಂಡ ವಿಧಿಸುವುದು, ಬೀದಿ ನಾಯಿಗಳ ದತ್ತು ಸ್ವೀಕಾರ, ವಧಾಲಯಗಳ ಸ್ವಚ್ಛತೆ, ಹೀಗೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಉದ್ಯಾನಗಳಲ್ಲಿ ನೀರು, ಸ್ವಚ್ಛತೆ, ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪೌರ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ ಸೇರಿ ಇತರ ಕಾರ್ಯಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.
ಸಮಿತಿ ಸದಸ್ಯರಾದ ಮಹ್ಮದ್ ಇಕ್ಬಾಲ್ ನವಲೂರ, ಮಹಾದೇವಪ್ಪ ನರಗುಂದ, ಸುಮಿತ್ರಾ ಗುಂಜಾಳ, ಫಮೀದಾ ಕಾರಡಗಿ, ಚಂದ್ರಕಲಾ ಕೊಟಬಾಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.