ಶಾಲೆಗಳ ಡಿಜಿಟಲೀಕರಣಕ್ಕೆ ಒತ್ತು

24mkh1
Published on

ಎಂ.ಕೆ.ಹುಬ್ಬಳ್ಳಿ: ಹಂತಹಂತವಾಗಿ ಕ್ಷೇತ್ರದ ಎಲ್ಲ ಶಾಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಕಳೆದ ಸಾಲಿನಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರು ಶೈಕ್ಷಣಿಕ ಕ್ಷೇತ್ರ ಪ್ರಥಮ ಸ್ಥಾನ ಪಡೆದಂತೆ ಪ್ರಸಕ್ತ ಸಾಲಿನಲ್ಲೂ ಪಡೆಯಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸ್ಥಳೀಯ ಶ್ರೀ ಕಲ್ಮೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಕಿತ್ತೂರು ಕ್ಷೇತ್ರದ ಎಸ್‌ಎಸ್‌ಎಲ್‌ಸಿ ಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ಗುಣಮಟ್ಟ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಎಲ್ಲ ಶಾಲೆಗಳಲ್ಲಿ ಶಿಕ್ಷಣಕ್ಕೆ ಪೂರಕವಾದ ಅಭಿವದ್ಧಿ ಕಾರ್ಯಗಳಿಗೆ ಒತ್ತು ನೀಡಿ ಹಂತ ಹಂತವಾಗಿ ಕ್ಷೇತ್ರದ ಎಲ್ಲ ಶಾಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ.

ಕಿತ್ತೂರು ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಶಿಕ್ಷಕರ ಶ್ರಮ ಅಗಾಧವಾದದ್ದು. ಈ ಬಾರಿ ವಿಭಾಗಮಟ್ಟದಲ್ಲಿ ಕಿತ್ತೂರು ತಾಲೂಕು ಪ್ರಥಮ ಸ್ಥಾನ ಪಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೈಲಹೊಂಗಲ ತಾಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಅನೀತಾ ಕರೆಪ್ಪ ಪೂಜೇರಿ, ಪವನಕುಮಾರ ಈರನಗೌಡ ಕಲ್ಲೂರ, ಪ್ರೀತಿ ಶ್ರೀಶೈಲ ಸಾವಳಗಿ ಅವರಿಗೆ ಉಚಿತ ಲ್ಯಾಪ್‌ಟಾಪ್ ನೀಡಿ ಪ್ರೋತ್ಸಾಹಿಸಲಾಯಿತು.

ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಶ ಸಂಬನ್ನವರ ಉದ್ಘಾಟಿಸಿದರು. ಕಿತ್ತೂರು ಬಿಇಒ ಸಿ.ವೈ.ತುಬಾಕದ, ಬೈಲಹೊಂಗಲ ಬಿಇಒ ಎ.ಎನ್.ಪ್ಯಾಟಿ, ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನ್ನವರ, ಮಹೇಶ ಚನ್ನಂಗಿ, ಗಜಾನನ ಸೊಗಲನ್ನವರ, ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಜಿ.ಎಸ್. ಹಲಸಗಿ, ಲಕ್ಷ್ಮಣ ಗೋಕಾರ, ಬಸಪ್ಪ ಕರವಿನಕೊಪ್ಪ, ಅರುಣ ರಾಹುತ, ಬಸವರಾಜ ತೋರಗಲ್, ಶಿಕ್ಷಕರಾದ ಎಸ್.ಎ.ಮಳಗಲಿ, ಶಂಕರ ಕಳಸಣ್ಣವರ, ವಿಜಯ ರಾಹುತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net