

ಕೆಜಿಎಫ್-: ಹೈಮಾಸ್ಟ್ ದೀಪಗಳ ನಿರ್ವಹಣೆಗೆ ವರ್ಷಕ್ಕೆ 40 ಸಾವಿರ ಖರ್ಚು ಬರುತ್ತದೆ ಎಂದರೆ ಇನ್ನು ಮುಂದೆ ಪಿಡಿಒಗಳು ಹೈಮಾಸ್ಟ್ ದೀಪಗಳ ನಿರ್ವಹಣೆ ಮಾಡಬೇಡಿ. ಎರಡು ವರ್ಷಕ್ಕೆ ಹೈಮಾಸ್ಟ್ ದೀಪಗಳ ನಿರ್ವಹಣೆ ಮಾಡುವವರಿಗೆ ಗುತ್ತಿಗೆ ನೀಡುವಂತೆ ಶಾಸಕಿ ರೂಪಕಲಾ ತಿಳಿಸಿದರು.
ನಗರದ ಹೊರವಲಯದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒಗಳು ಮತ್ತು ತಾಲೂಕುಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪಗಳ ನಿರ್ವಹಣೆ ವೆಚ್ಚ ದುಬಾರಿಯಾಗಿದ್ದು, ಗುತ್ತಿಗೆ ನೀಡುವ ಮೂಲಕ ವೆಚ್ಚ ಕಡಿಮೆ ಮಾಡಲು ಸೂಚಿಸಿದರು. ತಾಲೂಕಿನಲ್ಲಿ 110 ಕಿ.ಮೀ. ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರಲಾಗುವುದು, ತೀರ ಹದಗೆಟ್ಟಿರುವ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಗುರುತಿಸಿ ಗ್ರಾಮೀಣ ಇಲಾಖೆಗೆ ಮಾಹಿತಿ ನೀಡಬೇಕು. ತಾಲೂಕಿನ 16 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕೊಳವೆ ಬಾವಿಗಳ, ಕುಡಿಯುವ ನೀರಿನ ಸ್ಥಿತಿಗತಿಗಳ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದುಕೊಂಡರು.
ನೀರಿನ ಸಮಸ್ಯೆ ಬಾರದಿರಲಿ: ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟು ಕಾರ್ಯನಿರ್ವಹಿಸುತ್ತಿವೆ?, ಕೆಟ್ಟು ಹೋಗಿರುವ ಘಟಕಗಳು ಎಷ್ಟು?, ಎಷ್ಟು ಗ್ರಾಮಗಳಲ್ಲಿ ನಿರಿನ ಘಟಕಗಳ ಅವಶ್ಯ ಇದೆ?, ಅಗತ್ಯವಿರುವ ಕಡೆ ನೀರಿನ ಘಟಕಗಳ ಸ್ಥಾಪನೆಗೆ ಮುಂದಾಗಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಜಲ ಜೀವನ್ ಮಿಷನ್ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ನೀರು ಪೂರೈಸಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಿದರು. ಗ್ರಾಮೀಣ ಭಾಗದಲ್ಲಿ ಕೋಳಿ ಫಾಮ್ರ್ ಶೆಡ್ಗಳ ಸ್ಥಾಪನೆಗೆ ಅನುಮತಿ ನೀಡುವಾಗ ಕನಿಷ್ಠ ಗ್ರಾಮಗಳಿಂದ 3 ಕಿ.ಮೀ. ದೂರದ ನಿಯಮ ಪಾಲಿಸಿ ಅನುಮತಿ ನೀಡಿ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಶಾಸಕಿ ತಿಳಿಸಿದರು.
ಆರು ದಿನವೂ ಮೊಟ್ಟೆ ನೀಡಿ: ಸರ್ಕಾರಿ ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ನೀಡುತ್ತಿದ್ದು, ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಅಜೀಂ ಫೌಂಡೇಶನ್ ಕೈ ಜೋಡಿಸಿದೆ. ವಾರದಲ್ಲಿ 6 ದಿನ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಅಜೀಂ ಪ್ರೇಮ್ಜಿ ಫೌಂಡೇಷನ್ 1,500 ಕೋಟಿ ರೂ. ದೇಣಿಗೆ ನೀಡಿದೆ. ವಾರದಲ್ಲಿ 6 ದಿನಗಳ ಕಾಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಬಿಇಒಗೆ ಶಾಸಕಿ ರೂಪಕಲಾ ಸೂಚಿಸಿದರು.
ಅಂಗನವಾಡಿಗಳಲ್ಲಿ ಮಾಂಟೆಸರಿ: ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸರಿ ಶಿಕ್ಷಣ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ತಾಲೂಕಿನ 280 ಅಂಗನವಾಡಿ ಕೇಂದ್ರಗಳಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಶಿಕ್ಷಣ ನೀಡಲಾಗುವುದು. ಈಗಾಗಲೇ ರಾಜ್ಯದಲ್ಲಿ 250 ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಮಾಂಟೆಸರಿ ಶಿಕ್ಷಣ ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಎಇಇ ರವಿಚಂದ್ರನ್, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಸೂರ್ಯಪ್ರಕಾಶ್, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಇದ್ದರು.