13 ಗ್ರಾಪಂಗಳ ಸಮಗ್ರ ಅಭಿವೃದ್ಧಿಗೆ ಒತ್ತು

FotoJet (5)
Published on

ಶಾಸಕ ಸಿ.ಬಿ.ಸುರೇಶ್​ ಬಾಬು ಮಾಹಿತಿ | ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ >

ವಿಜಯವಾಣಿ ಸುದ್ದಿಜಾಲ ಹುಳಿಯಾರು

ಗಣಿಬಾಧಿತ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಚಿಕ್ಕನಾಯಕನಹಳ್ಳಿಯ 13 ಗ್ರಾಪಂ ವ್ಯಾಪ್ತಿಗಳಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕೃಷಿ, ಪಶು ಸಂಗೋಪನೆ, ಅರಣ್ಯ ಇಲಾಖೆಗಳು ಸೇರಿದಂತೆ ರಸ್ತೆಗಳ ಅಭಿವೃದ್ಧಿಗೆ ಮೈನಿಂಗ್​ ಹಣ ಬಳಕೆ ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್​ ಬಾಬು ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯಿಂದ ಆಯೋಜಿಸಿದ್ದ ಮತಿಘಟ್ಟ ಗೆಟ್​ನಿಂದ ಕೈ ಮರದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಪಂಚನಹಳ್ಳಿ ಗಡಿಯಿಂದ ಗುಬ್ಬಿಯ ಗಡಿಭಾಗದವರೆಗೆ ಸುಮಾರು 60 ಕಿ.ಮೀ ರಸ್ತೆ ನಿರ್ಮಿಸಿದ್ದು, ಇದುವರೆಗೆ ಹಾಳಾಗಿಲ್ಲ. ಅದೇ ರೀತಿಯಲ್ಲಿ ಈ ಸಂಪರ್ಕ ರಸ್ತೆಯನ್ನು ಪಟ್ಟಣದ ಮತಿಘಟ್ಟಗೇಟ್​ನಿಂದ ಕೈ ಮರದವರೆಗೆ 7 ಮೀಟರ್​ ಅಗಲ 8 ಇಂಚು ದಪ್ಪದಲ್ಲಿ ರಸ್ತೆ ಹಾಗೂ ಚರಂಡಿ ನಿಮಾರ್ಣವನ್ನು ಮಾಡುವ ಮೂಲಕ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

2013ರಲ್ಲಿ ತಾಲೂಕಿನ ಸಂಪೂರ್ಣ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಅದರೆ ಗಣಿಬಾಧಿತ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 1,200 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ 400 ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ. ಉಳಿದಂತೆ ಮನೆಗಳನ್ನು ನೀಡುವುದು, ಕೃಷಿ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮ, ಪಶುಸಂಗೋಪನಾ ಇಲಾಖೆಯಿಂದ ಹಸುಗಳ ವಿತರಣೆ, ಅರಣ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಮಾಹಿತಿ ನೀಡಿದರು.

ಪಿಎಲ್​ಡಿ ಬ್ಯಾಂಕ್​ನ ನಿರ್ದೇಶಕ ರಾಮಚಂದ್ರಯ್ಯ ಮಾತನಾಡಿ, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಯಾದರೆ ಗ್ರಾಮಗಳ ಜನತೆಗೆ ಅನುಕೂಲವಾಗುತ್ತದೆ. ರಸ್ತೆಯನ್ನು ನಿರ್ಮಿಸುವ ವೇಳೆ ಸಾರ್ವಜನಿಕರು ಸ್ಪಂದಿಸಬೇಕು. ಗುಣಮಟ್ಟದ ರಸ್ತೆ ಮಾಡಿಸಿಕೊಳ್ಳಿ ಎಂದರು.

ಲೋಕೊಪಯೋಗಿ ಇಲಾಖೆಯ ಎಇಇ ತಿಮ್ಮಯ್ಯ ರಸ್ತೆ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net