ಗ್ರಾಮಗಳಲ್ಲಿ ಸ್ಚಚ್ಛತೆಗೆ ಒತ್ತು ನೀಡಲಿ

14-KGLPHOTO-1,,,.,,,,
ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಪ್ರಗ ಪರಿಶೀಲನೆ ಸಭೆ ನಡೆಯಿತು.
Published on

ಕೊಳ್ಳೇಗಾಲ: ಗ್ರಾಮಗಳ ನೈರ್ಮಲ್ಯತೆ ಹಾಗೂ ನೀರಿನ ತೊಂಬೆಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೀಡಬೇಕೆಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆ ಉದ್ದೇಶಿಸಿ ಮಾತನಾಡಿದರು.

ಮಳೆಗಾಲದಲ್ಲಿ ತೊಂಬೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಲವು ಗ್ರಾಮಗಳಲ್ಲಿ ತೊಂಬೆಗಳು ಪಾಚಿಯಿಂದ ಭರ್ತಿ ಆಗಿರುವ ಮಾಹಿತಿ ಇದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾವ ಬೀರುತ್ತದೆ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೂ ನಾನು ಖುದ್ದು ಭೇಟಿ ಮಾಡಿ ಸ್ವಚ್ಛತೆಯನ್ನು ವೀಕ್ಷಿಸುತ್ತೇನೆ. ತೊಂಬೆಗಳನ್ನು ಪರಿಶೀಲಿಸುತ್ತೇನೆ. ಆದ್ದರಿಂದ ಸಕಾಲಕ್ಕೆ ತೊಂಬೆಗಳ ಸ್ವಚ್ಛತೆ ಆಗಿರಬೇಕು. ಜನರಿಗೆ ಶುದ್ಧ ನೀರು ಸಿಗಬೇಕು. ಜತೆಗೆ ಚರಂಡಿ ಹೂಳು ತೆಗೆಸಬೇಕೆಂದು ತಿಳಿಸಿದರು.

ಈ ವೇಳೆ ಸಿಡಿಪಿಒ ನಂಜಮಣಿ ಮಾತನಾಡಿ, ಕೊಳ್ಳೇಗಾಲ ತಾಲೂಕು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪಾಳ್ಯ ಹೋಬಳಿಯಲ್ಲಿರುವ ಅಂಗನವಾಡಿ ಕೇಂದ್ರಗಳ ಸ್ವಂತ ಕಟ್ಟಡಗಳು, ಬಾಡಿಗೆ ಕಟ್ಟಡಗಳು, ಶಾಲೆ, ಸಮುದಾಯ ಭವನಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ಶಾಸಕರು ಪ್ರತಿಕ್ರಿಯಿಸಿ, ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ದುರಸ್ತಿ ಆಗಬೇಕಾದ ಅಂಗನವಾಡಿ ಕೇಂದ್ರಗಳ ಮಾಹಿತಿ ನೀಡುವಂತೆ ಸೂಚಿಸಿದರು. ಪಿಡಿಒಗಳು ಗ್ರಾಮಗಳಲ್ಲಿ ನಿವೇಶನಗಳನ್ನು ಗುರುತು ಮಾಡಿಕೊಟ್ಟರೆ ಅಂಗನವಾಡಿ ನಿರ್ಮಾಣಕ್ಕೆ ಅನುಕೂಲ ಆಗಲಿದೆ ಎಂದರು. ಶೈಕ್ಷಣಿಕ ಪ್ರಗತಿ, ಪ್ರಾಥಮಿಕ ಆಸ್ಪತ್ರೆಗಳ ಅಭಿವೃದ್ಧಿ ಇನ್ನಿತರ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಶಾಸಕ ಎಂ.ಆರ್.ಮಂಜುನಾಥ್ ಮಾಹಿತಿ ಪಡೆದುಕೊಂಡು ಚರ್ಚಿಸಿದರು.

ಮಾಧ್ಯಮಗಳಿಗೆ ಮಾಹಿತಿ ನೀಡಿ: ತಾಪಂ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಗೆ ಮಾಧ್ಯಮದವರಿಗೆ ಆಹ್ವಾನ ನೀಡಿರಲಿಲ್ಲ. ಈ ಬಗ್ಗೆ ತಾಪಂ ಇಒ ಶ್ರೀನಿವಾಸ್ ಅವರನ್ನು ಶಾಸಕರ ಎದುರು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಶ್ರೀನಿವಾಸ್ ಜರೂರಾಗಿ ಕಾರ್ಯಕ್ರಮ ನಿಗದಿಯಾದ ಕಾರಣ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಲಿಲ್ಲ ಎಂದು ಸಮಾಜಾಯಿಷಿ ನೀಡಿದರು. ನಂತರ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಇನ್ಮುಂದೆ ಪ್ರಗತಿ ಪರಿಶೀಲನೆ ಸಭೆಗಳನ್ನು ಮಾಧ್ಯಮಗಳಿಗೆ ಮಾಹಿತಿ ನೀಡಿ ಆಯೋಜಿಸುವಂತೆ ಖಡಕ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಸೆಸ್ಕ್ ಇಇ ತಬುಸುಂ ಬಾನು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net