ಬಗರ್‌ಹುಕುಂ ಅರ್ಜಿ ವಿಲೇಗೆ ಒತ್ತು

byregowda
Published on

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ. ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು ಎಂದು ತಾಕೀತು ಮಾಡಿದರು.

ಮೈಸೂರು ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಒಟ್ಟು 721 ಪ್ರಕರಣಗಳಿವೆ. ಈ ಪೈಕಿ 386 ಪ್ರಕರಣಗಳಲ್ಲಿ ತೆಗೆದುಕೊಂಡಿರುವ ಕ್ರಮ ಶೂನ್ಯ. ತಹಸೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಠ ವಕಾಲತ್ತನ್ನೂ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net