ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನಾಧಾರಿತ ಅಭಿವೃದ್ಧಿಗೆ ಒತ್ತು ಅಗತ್ಯ: ಸದಾನಂದಗೌಡ ಸಲಹೆ

Student
Published on

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಪಡೆದು ವೃತ್ತಿಗೆ ಸೀಮಿತವಾಗದೆ ಸಂಶೋಧನೆಗಳ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸಲಹೆ ನೀಡಿದ್ದಾರೆ.

ವಿವಿ ಪುರದ ಒಕ್ಕಲಿಗರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನಧಾರಿತ ಅಭಿವೃದ್ಧಿ ಹಾಗೂ ಸುಧಾರಿತ ತಂತ್ರಜ್ಞಾನ ಅನುಷ್ಠಾನಕ್ಕೆ ಒತ್ತು ಕೊಡಬೇಕು. ಗುಣಮಟ್ಟ ಚಿಕಿತ್ಸೆ ನೀಡಬೇಕು ಎಂದರು.

ಕರೊನಾಕ್ಕೆ ಮದ್ದು ಕಂಡುಹಿಡಿಯಬೇಕು: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ಸೋಂಕು ತಡೆಯುವ ಜವಾಬ್ದಾರಿ ವೈದ್ಯರ ಮೇಲಿದೆ. ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಈ ಸೋಂಕು ವಿಶ್ವದ ಹಲವು ಭಾಗಗಳಿಗೆ ಹಬ್ಬಿ ಜನರನ್ನು ಸಾವಿನ ದವಡೆಗೆ ತಳ್ಳುತ್ತಿದೆ. ಹೀಗಾಗಿ, ಇದರ ಶಮನಕ್ಕೆ ತುರ್ತಾಗಿ ಔಷಧ ಕಂಡುಹಿಡಿಯಬೇಕಿದೆ ಎಂದು ತಿಳಿಸಿದರು.

140 ಪದವಿ ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಯಿತು. ರಾಜ್ಯ ಒಕ್ಕಲಿಗ ಸಂಘದ ನಿರ್ವಾಹಕ ಎಚ್.ಎಸ್. ಅಶೋಕಾನಂದ, ಸಂಘದ ಸಿಇಒ ಡಾ. ಕೆ.ಎಚ್. ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿವೆ 591 ವೈದ್ಯಕೀಯ ಕಾಲೇಜು

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ 381 ವೈದ್ಯಕೀಯ ಕಾಲೇಜಿಗಳಿದ್ದವು. ವೈದ್ಯಕೀಯ ಕ್ಷೇತ್ರಕ್ಕೆ ಅವರು ಹೆಚ್ಚು ಒತ್ತು ಕೊಟ್ಟಿದ್ದರಿಂದ ಇದೀಗ ಅವುಗಳ ಸಂಖ್ಯೆ 591ಕ್ಕೆ ಹಿಗ್ಗಿದೆ. ಅಲ್ಲದೆ, ದೇಶದ 720 ಜಿಲ್ಲೆಗಳಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಹೊಂದಲಾಗಿದೆ. ದೇಶಾದ್ಯಂತ 6 ಸಾವಿರ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವೈದ್ಯಕೀಯ ಕ್ಷೇತ್ರಕ್ಕೆ ದೇಶದ ಜಿಡಿಪಿಯಲ್ಲಿ ಶೇ.3ಕ್ಕಿಂತ ಹೆಚ್ಚು ಅನುದಾನ ಮೀಸಲಿಡಲು ಕೇಂದ್ರ ನಿರ್ಧರಿಸಿದೆ ಎಂದು ಸದಾನಂದಗೌಡ ತಿಳಿಸಿದರು.

ಪ್ರತಿಯೊಬ್ಬ ವೈದ್ಯರು ತಮ್ಮ ಬಳಿ ಬರುವ ರೋಗಿಗಳನ್ನು ಕುಟುಂಬದ ಸದಸ್ಯರಂತೆ ಭಾವಿಸಿ ಚಿಕಿತ್ಸೆ ನೀಡಬೇಕು. ಪದವಿ ಪೂರೈಸಿರುವ ವಿದ್ಯಾರ್ಥಿಗಳು ಸಮಾಜಸೇವೆ ಮಾಡುವ ಕ್ಷೇತ್ರಕ್ಕೆ ಕಾಲಿಡುತ್ತಿದ್ದೀರಿ. ಹೀಗಾಗಿ, ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡಬೇಕು. | ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮಕ್ಕಳ ಹೃದ್ರೋಗ ತಜ್ಞೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net