ಶಿಲ್ಪಕಲೆಗಳ ಸಾಮ್ರಾಟ ಜಕಣಾಚಾರಿ

BLY- 1-4
ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯ ಆವರಣದ ಹೊಂಗಿರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉಪ ಮೇಯರ್ ಬಿ.ಜಾನಕಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಉಪನ್ಯಾಸಕ ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಬಸವರಾಜ್, ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಚಂದ್ರ ಇದ್ದರು.
Published on

ಬಳ್ಳಾರಿ : ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರವಾದುದು. ಅಂತಹ ಅಪರೂಪದ ಕೊಡುಗೆಯನ್ನು ಕಲಾ ಕೌಶಲ ಮೂಲಕ ನಾಡಿಗೆ ನೀಡಿ ಅಜರಾಮರನಾದವನು ಅಮರಶಿಲ್ಪಿ ಜಕಣಾಚಾರಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯ ಆವರಣದ ಹೊಂಗಿರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಮರ ಶಿಲ್ಪಿ ಜಕಣಾಚಾರಿ ಅವರ ಉತ್ತಮ ಜ್ಞಾನ ಮತ್ತು ಕಲಾತ್ಮಕ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಜಕಣಾಚಾರಿ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ, ಅವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ವಿಶ್ವನಾಥ್ ಮಾತನಾಡಿ, ಜಕಣಾಚಾರಿ ಅವರು ತುಮಕೂರಿನ ಕ್ರೀಡಾಪುರ ಎಂಬ ಹಳ್ಳಿಯಲ್ಲಿ ಜನಿಸಿದವರು. ಸೌಂದರ್ಯ ಮತ್ತು ಕಲಾ ಆರಾಧಕನಾಗಿದ್ದ ಜಕಣಾಚಾರಿ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳಿಂದ ಬೇಸತ್ತು ಹೆಂಡತಿ ಮನೆ, ಊರನ್ನು ತೊರೆದು ಲೋಕಸಂಚಾರಿಯಾಗಿ ಅಲೆಯುತ್ತಿರುವಾಗ ರಾಮಾನುಜಾಚಾರ್ಯರು ಮಾರ್ಗದರ್ಶನ ದಿಂದ ತನ್ನ ವೃತ್ತಿಯಲ್ಲಿ ಏಕಾಗ್ರತೆಯನ್ನು ಸಾಧಿಸಿದವರು ಎಂದು ಹೇಳಿದರು.

ಮಗನಾದ ಡಂಕಣಾಚಾರ್ಯರು ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದರು.ಬೇಲೂರಿನಲ್ಲಿ ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡವರು ಎಂದರು.

ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಬಸವರಾಜ್, ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಚಂದ್ರ ಸೇರಿದಂತೆ ಸಮಾಜದ ಮುಖಂಡರುಗಳು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net