

ವಿಜಯವಾಣಿ ಸುದ್ದಿಜಾಲ ಧಾರವಾಡ
ಪೂರ್ವಾಗ್ರಹ ಪೀಡಿತ ಕುಬ್ಜ ಮನಸ್ಥಿತಿಯಿಂದ ಹೊರಬಂದು ಪ್ರತಿಭೆಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸುವ ಯುಕ್ತ ಮತ್ತು ಮುಕ್ತವಾದ ವಿಭಿನ್ನ ವಿಶಿಷ್ಟ ಜನಪರ ಚಟುವಟಿಕೆಗಳ ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು ಸಾಧ್ಯ ಎಂದು ಜೀವನ ಶಿಕ್ಷ ಣ ಮಾಸಪತ್ರಿಕೆ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ನಗರದ ಸವದತ್ತಿ ರಸ್ತೆಯ ಜೆಎಸ್ಎಸ್ ಪದವಿ ಪೂರ್ವ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಕುಲದ ಬಾಳಪಥದ ಹೆಜ್ಜೆಗಳ ಸಾಂಸ್ಕೃತಿಕ ಪರಂಪರೆಯ ಸಂವರ್ಧನೆಗೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಾಷ್ಟ್ರದ ಐಕ್ಯತೆ ಗಟ್ಟಿಗೊಳಿಸುವ, ಸಹೋದರತೆ ಹುಟ್ಟು ಹಾಕುವ ಮತ್ತು ಮನಸ್ಸುಗಳನ್ನು ತಿಳಿಗೊಳಿಸುವ ಕಾರ್ಯ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಅಭಿವೃದ್ಧಿ ಅಧಿಕಾರಿ ಡಾ.ಸೂರಜ್ ಜೈನ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಾಧಾರಿತ ಜೀವನ ವಿಧಾನ, ಸಮಯ ಪ್ರಜ್ಞೆಯಲ್ಲಿ ಅಧ್ಯಯನದ ತನ್ಮಯತೆಯಿಂದ ವಿಶಿಷ್ಟ ಬೌದ್ಧಿಕ ಸಾಮರ್ಥ್ಯ ಸಂಪಾದಿಸಿ ವಿಶ್ವದ ಹೊಸತು ಅನ್ವೇಷಣೆಗಳಿಗೆ ತೆರೆದುಕೊಂಡು ಸ್ಪರ್ಧಾತ್ಮಕ ವಿಕಾಸದತ್ತ ಹೆಜ್ಜೆ ಹಾಕಬೇಕು. ಅಧ್ಯಯನದ ಶಿಸ್ತು ರೂಢಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ನಗೆ ಬೀರುವ ಗುರಿಗಳನ್ನು ಹೊಂದಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎನ್. ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್. ತ್ರಿವೇಣಿ, ನಾಗರಾಜ ತೋಟಿಗೇರ, ಇತರರು ಇದ್ದರು.
ವಿನಾಯಕ ಇಂಗಳಗಿ ಸ್ವಾಗತಿಸಿದರು. ಭೂಮಿಕಾ ಸಿದ್ಧನಗೌಡರ ನಿರೂಪಿಸಿದರು. ಪ್ರಗತಿ ಕುಲಕರ್ಣಿ ವಂದಿಸಿದರು.