ಎಮ್ಮೆಕರೆ ಕ್ರಿಕೆಟ್ ಮೈದಾನ ಅಭಿವೃದ್ಧಿಗೆ ಕಾಂಗ್ರೆಸ್ ನಿರ್ಲಕ್ಷೃ -ಶಾಸಕ ವೇದವ್ಯಾಸ್ ಕಾಮತ್

allwyn_130820_kamath
Published on



ಮಂಗಳೂರು : ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆಗೆ ತರಾತುರಿಯಲ್ಲಿ ತಯಾರಿ ನಡೆಸಿ ಇಲ್ಲಿನ ಕ್ರಿಕೆಟ್ ಮೈದಾನದ ಅಭಿವೃದ್ಧಿಯನ್ನು ನಿರ್ಲಕ್ಷೃ ಮಾಡಿರುವ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಹಿಂದಿನ ಶಾಸಕರ ಅವಧಿಯಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ಕ್ರಿಕೆಟ್ ಮೈದಾನದಲ್ಲಿ ಈಜುಕೊಳ ನಿರ್ಮಾಣವಾಗುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ನಾನು ಶಾಸಕನಾದ ಮೇಲೆ ಈ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ಕಾರ್ಪೋರೇಟರ್‌ಗಳ ನೆರವು ಪಡೆದು ಸ್ಥಳೀಯರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು 1 ಎಕರೆ 57 ಸೆಂಟ್ಸ್ ಜಾಗವನ್ನು ಆಟದ ಮೈದಾನಕ್ಕೆ ಕಾಯ್ದಿರಿಸಿ, 2 ಎಕರೆ ಜಾಗವನ್ನು ಮಾತ್ರ ಈಜುಕೊಳಕ್ಕೆ ಉಪಯೋಗಿಸಲು ತೀರ್ಮಾನಿಸಲಾಗಿತ್ತು. ಸ್ಥಳೀಯರ ಒಪ್ಪಿಗೆಯೊಂದಿಗೆ ಈಜುಕೊಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈಜುಕೊಳ ನಿರ್ಮಾಣದ ಜತೆಯಲ್ಲಿಯೇ ಈ ಮೈದಾನದಲ್ಲಿ ಕ್ರಿಕೆಟಗೆ ಪೂರಕವಾದ ಪೆವಿಲಿಯನ್, ವೀಕ್ಷಕ ಗ್ಯಾಲರಿ, ಮೈದಾನದ ಹೊರ ಭಾಗದಲ್ಲಿ ವಾಕಿಂಗ್ ಟ್ರಾೃಕ್ ಮತ್ತು ಹೊನಲು ಬೆಳಕಿನ ವ್ಯವಸ್ಥೆಗೆ 2 ಕೋಟಿ ರೂ. ಮೀಸಲಿರಿಸಿ ಶಿಲಾನ್ಯಾಸ ನಡೆಸಲಾಗಿತ್ತು. ಪ್ರಸ್ತುತ ಈಜುಕೊಳದ ಕಾಮಗಾರಿಯು ಬಹುತೇಕ ಪೂರ್ಣಗೊಂಡು ಅಂತಿಮ ಹಂತದ ಕಾಮಗಾರಿ ಬಾಕಿ ಇದ್ದರೂ ತರಾತುರಿಯಲ್ಲಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಇಲ್ಲಿನ ಕ್ರಿಕೆಟ್ ಮೈದಾನ ಅಭಿವೃದ್ದಿಗೆ ಮೀಸಲಾದ 2ಕೋಟಿ ಅನುದಾನವನ್ನು ಬಳಸದೇ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಗೊಂದಲಮಯ ವಾತಾವರಣ ಸೃಷ್ಟಿಸಿದೆ. ಕ್ರೀಡಾಪಟುಗಳಿಗೆ, ಸ್ಥಳೀಯರಿಗೆ ಅನ್ಯಾಯವಾಗುತ್ತಿದ್ದು ಹೋರಾಟಕ್ಕೆ ಇಳಿಯುವುದು ಶಾಸಕನಾಗಿ ನನ್ನ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಈಜುಕೊಳ ನಿರ್ಮಾಣ ಸಂದರ್ಭದಲ್ಲಿಯೇ ಸ್ಥಳೀಯರು ಕ್ರಿಕೆಟ್ ಮೈದಾನದ ಕುರಿತಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಈಜುಕೊಳಕ್ಕೆ ಸಮ್ಮತಿ ಸೂಚಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಅಂದು ಅವರ ಬೇಡಿಕೆಗಳನ್ನು ಒಪ್ಪಿಕೊಂಡು ಕಾಮಗಾರಿ ಆರಂಭಿಸಿದ ಮೇಲೆ ಬೇಡಿಕೆ ಈಡೇರಿಸುವುದು ಸರ್ಕಾರದ ಜವಾಬ್ದಾರಿ. ಕ್ರಿಕೆಟ್ ಆಟದ ಮೈದಾನಕ್ಕೆ ಶಂಕುಸ್ಥಾಪನೆ ನಡೆಸಲಾಗಿದ್ದು,
ಈಗ ಅಲ್ಲಿಯೇ ಮತ್ತೆ ಹೊಸದಾಗಿ ಮುಖ್ಯಮಂತ್ರಿಯವರಿಂದ ಶಂಕುಸ್ಥಾಪನೆಯನ್ನು ನಡೆಸಲು ತೀರ್ಮಾನಿಸಿರುವುದು ಮುಖ್ಯಮಂತ್ರಿಯವರಿಗೆ ಮಾಡುವ ಅವಮಾನವಾಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net