ವಿಶ್ವದ ಅತೀದೊಡ್ಡ ವಿಮಾನಕ್ಕೆ ಉಡುಪಿ ಮೂಲದ ಪೈಲಟ್

SANDEEP PRABHU
Published on

ಉಡುಪಿ: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಶುಕ್ರವಾರ ಬಂದಿಳಿದ ವಿಶ್ವ ಅತೀದೊಡ್ಡ ಪ್ರಯಾಣಿಕ ವಿಮಾನ ಎಮಿರೇಟ್ಸ್ ಏರ್‌ಬಸ್ ಅ380 ಪರೀಕ್ಷಾರ್ಥ ಹಾರಾಟವನ್ನು ಉಡುಪಿ ಮೂಲದ ಪೈಲಟ್ ಸಂದೀಪ್ ಪ್ರಭು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಅಲೆವೂರಿನ ಆರತಿ ಪ್ರಭು ಮತ್ತು ಶಿವರಾಯ ಪ್ರಭು ದಂಪತಿಯ 2ನೇ ಪುತ್ರ ಸಂದೀಪ್ ಕಳೆದ 15 ವರ್ಷದಿಂದ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಿಲಿಫಿನ್ಸ್ ದೇಶದಲ್ಲಿ ಪೈಲಟ್ ತರಬೇತಿ ಪಡೆದ ಅವರು, ಫ್ರಾನ್ಸ್‌ನಲ್ಲಿ ಉನ್ನತ ಕೋರ್ಸ್ ಮುಗಿಸಿದ್ದಾರೆ. ನಂತರ ದುಬೈ ಎಮಿರೇಟ್ಸ್ ವಿಮಾನ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು. ಈ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇದೇ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದರು. ಈ ಬಾರಿ ಬೆಂಗಳೂರಿನಲ್ಲಿ ಕನ್ನಡದಲ್ಲಿ ಸ್ವಾಗತ ಘೋಷಣೆ ಮಾಡಿ ಗಮನ ಸೆಳೆದಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2ನೇ ಟರ್ಮಿನಲ್ ಲೋಕಾರ್ಪಣೆ ಬಳಿಕ ಸುಮಾರು 30 ದೇಶಗಳಿಗೆ ನೇರ ಸಂಪರ್ಕ ಲಭ್ಯವಾಗಲಿದೆ. ಅ.30 ರಿಂದ ದುಬೈ ಮತ್ತು ಬೆಂಗಳೂರು ನಡುವೆ ಎಮಿರೇಟ್ಸ್‌ನ ಅ380 ವಿಮಾನಗಳು ಪ್ರತೀದಿನ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ಸದ್ಯ ದುಬೈಯಲ್ಲಿ ವಾಸಿಸುತ್ತಿರುವ ಸಂದೀಪ್ ಅವರಿಗೆ ಬೆಂಗಳೂರು ಎರಡನೇ ಮನೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net