

ಹರಿಹರ: ತುರ್ತು ಚಿಕಿತ್ಸೆ ಸೇವೆಗಾಗಿ ರಾಜ್ಯ ವಕ್ಪ್ ಬೋರ್ಡ್ನಿಂದ ಹರಿಹರದ ಅಂಜುಮನ್ ಕಮಿಟಿಗೆ ಹೈಟೆಕ್ ತಂತ್ರಜ್ಞಾನವುಳ್ಳ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಏಜಾಜ್ ಆಹಮ್ಮದ್ ಹೇಳಿದರು.
ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಮುದಾಯದ ಹಿರಿಯರ ಕೋರಿಕೆ ಮೇರೆಗೆ ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಆಂಬ್ಯುಲೆನ್ಸ್ ಮಂಜೂರು ಮಾಡಿದ್ದಾರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 40 ಲಕ್ಷ ರೂ. ಮೌಲ್ಯದ ಆಂಬ್ಯುಲೆನ್ಸ್ನಲ್ಲಿ ಅತ್ಯಾಧುನಿಕ ಐಸಿಯು ಘಟಕ, ಆಮ್ಲಜನಕ ಘಟಕ, ವೆಂಟಿಲೇಟರ್ ಮತ್ತಿತರೆ ಸೌಲಭ್ಯಗಳಿವೆ. ತಾಲೂಕಿನ ಎಲ್ಲ ಸಮುದಾಯಗಳ ಅಗತ್ಯವಿರುವ ಜನರು ಇದನ್ನು ಉಪಯೋಗಿಸಿಕೊಳ್ಳಬಹುದು ಎಂದರು.
ಬೆಂಗಳೂರಿನಲ್ಲಿ ಬುಧವಾರ ಸಚಿವ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಜಬ್ಬರ್ ಖಾನ್ ಮತ್ತು ಬಲ್ಕಿಶ್ ಬಾನು ಅವರ ಸಮ್ಮುಖದಲ್ಲಿ ಆಂಬ್ಯುಲೆನ್ಸ್ ವಾಹನವನ್ನು ಅಂಜುಮನ್ ಕಮಿಟಿಗೆ ಹಸ್ತಾಂತರಿಸಿದರು ಎಂದು ಮಾಹಿತಿ ನೀಡಿದರು.
ಅಂಜುಮನ್ ಕಮಿಟಿ ಸದಸ್ಯ ಮತ್ತು ಸಮಾಜ ಸೇವಕ ಸೈಯದ್ ಸನಾವುಲ್ಲಾ ಮಾತನಾಡಿ, ಹೈಟೆಕ್ ತಂತ್ರಜ್ಞಾನವುಳ್ಳ ಆಂಬ್ಯುಲೆನ್ಸ್ ವಾಹನ ಬೇಡಿಕೆಗೆ ವಕ್ಪ್ ಬೋರ್ಡ್ ಸ್ಪಂದಿಸಿರುವುದು ಸಂತಸ ತಂದಿದೆ. ಇದರಿಂದ ಎಲ್ಲ ಸಮುದಾಯದವರ ತುರ್ತು ಸೇವೆಗೆ ಸಹಕಾರಿಯಾಗಲಿದೆ ಎಂದರು.
ಅಂಜುಮನ್ ಕಮಿಟಿ ಉಪಾಧ್ಯಕ್ಷ ಎಂ.ಎಂ.ಬಿ ಫಾರೂಕ್, ಕಾರ್ಯದರ್ಶಿ ಸೈಯದ್ ಆಸೀಫ್ ಜುನೈದ್, ಸದಸ್ಯರಾದ ಆರ್.ಸಿ ಜಾವಿದ್, ಅಪ್ರೋಸ್ ಖಾನ್, ಸೈಯದ್ ಬಶೀರ್ ದೋಸ್ತಾನ, ರೋಷನ್ ಜಮೀರ್, ನೂರುಲ್ಲಾ, ಮುಜಾಮಿಲ್ (ಬಿಲ್ಲು), ಸಾದಿಕ್ವುಲ್ಲಾ ಇದ್ದರು.