

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೆಸಿಡಿ ಆವರಣದ ಸೃಜನಾ ರಂಗ ಮಂದಿರದಲ್ಲಿ ಜೂ. 25ರಂದು ಸಂಜೆ 5 ಗಂಟೆಗೆ "ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ' ಕುರಿತು ಸಂವಾದ ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕರಾಳ ತುರ್ತು ಪರಿಸ್ಥಿತಿ ಘೋಷಣೆಗೆ 49 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಂವಾದ ಆಯೋಜಿಸಲಾಗಿದೆ. ಮಾಜಿ ಡಿಸಿಎಂ, ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ಅತಿಥಿಗಳಾಗಿ ಆಗಮಿಸುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಧನವಂತ ಹಾಜವಗೋಳ ಅಧ್ಯಕ್ಷತೆ ವಹಿಸುವರು ಎಂದರು.
ಸಂವಿಧಾನಕ್ಕೆ ಅಪಚಾರ ಬಗೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶವಾಸಿಗಳ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಸಂವಿಧಾನದ ಆಶಯಗಳಿಗೆ ದ್ರೋಹ ಮಾಡಿದ್ದು ರಾಹುಲ್ ಅವರ ಅಜ್ಜಿ ಇಂದಿರಾ ಗಾಂಧಿ. ಅದನ್ನು ಅರಿಯದ ರಾಹುಲ್ ಗಾಂಧಿ, ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ನೈಜ ಸಂಗತಿಗಳ ಕುರಿತು ಸಂವಾದ ಏರ್ಪಡಿಸಲಾಗಿದೆ ಎಂದರು.
ಮಹೇಂದ್ರ ಕೌತಾಳ, ಶಿವು ಹಿರೇಮಠ, ಇತರರು ಇದ್ದರು.