

ಉಡುಪಿ: ತುರ್ತುಸೇವೆಗಳಿಗೆ ಸ್ಪಂದಿಸುವ ಇಆರ್‌ಎಸ್ (ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ) ವಾಹನಗಳಿಗೆ ಜಿಲ್ಲೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿ 12 ಇಆರ್‌ಎಸ್ ಮಹೀಂದ್ರ ಸ್ಕಾರ್ಪಿಯೋ ವಾಹನಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಹಸಿರು ನಿಶಾನೆ ತೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ, ಇನ್ನೂ ಮುಂದೆ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳಿಗೆ ಕನಿಷ್ಠ ಸಮಯ ಮಿತಿಯಲ್ಲಿ ಸ್ಪಂದಿಸಲು ಸಾಧ್ಯವಾಗಲಿದೆ. ಪೊಲೀಸ್, ಅಗ್ನಿಶಾಮಕದಳ, ಆಂಬುಲೆನ್ಸ್ ನೆರವು ಸೇರಿದಂತೆ ತುರ್ತು ನೂತನ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ ವ್ಯವಸ್ಥೆಯಡಿ ಜಿಲ್ಲೆಯ ಯಾವ ಭಾಗದಿಂದ ಕರೆ ಬಂದರೂ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣೆ ಒದಗಿಸಲಾಗುತ್ತದೆ. ಈ ವಾಹನಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್‌ಪಿ ಸುಧಾಕರ ನಾಯಕ್, ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ಮೂರ್ತಿ ನಾಯಕ್ ಮತ್ತಿತರರಿದ್ದರು.
ಟೋಲ್‌ಫ್ರೀ 112ಕ್ಕೆ ಕರೆ ಮಾಡಿ
ಟೋಲ್ ಫ್ರೀ 112 ಬೆಂಗಳೂರು ಕೇಂದ್ರದ ನಿಯಂತ್ರಣದಲ್ಲಿದೆ. ಅಕ್ಷಾಂಶ ಹಾಗೂ ರೇಖಾಂಶದ ಆಧಾರದ ಮೇಲೆ, ಕರೆ ಬಂದ ಸ್ಥಳಕ್ಕೆ ಇಆರ್‌ಎಸ್ ವಾಹನಗಳು ಕ್ಷಿಪ್ರವಾಗಿ ತಲುಪುತ್ತದೆ. ಪ್ರತಿ ವಾಹನದಲ್ಲಿ ಎಎಸ್‌ಐ ದರ್ಜೆ ಪೊಲೀಸ್ ಅಧಿಕಾರಿ ಇರುತ್ತಾರೆ. ವಾಹನಗಳು ಈ ಹಿಂದೆ ಹೆಚ್ಚಿನ ಅಪರಾಧ ಘಟಿಸಿದ ಸ್ಥಳಗಳು, ಶಾಲಾ, ಕಾಲೇಜುಗಳ ಸಮೀಪ, ಜನ ದಟ್ಟಣೆ ಪ್ರದೇಶ, ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲಿದೆ. ಸಾರ್ವಜನಿಕರು, ಅಪಘಾತ, ಅಪರಾಧಗಳು ನಡೆದಲ್ಲಿ ತತ್‌ಕ್ಷಣವೇ ಟೋಲ್ ಫ್ರೀ ಸಂಖ್ಯೆ 112ಕ್ಕೆ ಕರೆ ಮಾಡಲು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.