

ಐಮಂಗಲ: ಪ್ರಕೃತಿ ವಿಕೋಪ, ಭೂಕಂಪ, ಪ್ರವಾಹ, ಬಾಂಬ್ ಸ್ಪೋಟ, ರೈಲು, ವಿಮಾನಗಳ ದುರಂತದ ಸಂದರ್ಭದಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆ ಸಕ್ರಿಯವಾಗಿ ಭಾಗವಹಿಸಿ ಆಪತ್ತಿನಲ್ಲಿ ಸಿಲುಕಿದವರನ್ನು ರಕ್ಷಿಸಲಿದೆ ಎಂದು ವಿಪತ್ತು ಸ್ಪಂದನಾ ಪಡೆಯ ಆರ್‌ಪಿಐ ಕಿರಣ್‌ಕುಮಾರ್ ಹೇಳಿದರು.
ದಾವಣಗೆರೆಯ ರಾಜ್ಯ ವಿಪತ್ತು ಸ್ಪಂದನಾ ಪಡೆಯಿಂದ ಗ್ರಾಮದ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಬುಧವಾ ಆಯೋಜಿಸಿದ್ದ ಅವಘಡ ಸಂದರ್ಭ ಜನರನ್ನು ರಕ್ಷಿಸುವ ಕುರಿತು ಪ್ರಾತ್ಯಕ್ಷೆ ಸಂದರ್ಭ ಮಾತನಾಡಿದರು.
ರಾಜ್ಯ ವಿಪತ್ತು ಸ್ಪಂದನಾ ಪಡೆ ಆರಂಭವಾಗಿ ಒಂದು ವರ್ಷವಾಗಿದ್ದು, ಬೆಂಗಳೂರು, ಮಂಗಳೂರು, ದಾವಣಗೆರೆ, ಕಲಬುರ್ಗಿ, ಬೆಳಗಾವಿಯಲ್ಲಿ ಐದು ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ನಾವುಗಳು ಜಾಗೃತ ಕ್ರಮಗಳ ಬಗ್ಗೆ ಗಮನಕೊಡಬೇಕು. ಗುಡುಗು, ಸಿಡಿಲು ಸಂದರ್ಭ ಎತ್ತರದ ಮರಗಳ ಕೆಳಗೆ ನಿಲ್ಲುವುದು ಅಪಾಯಕಾರಿ. ಅನೇಕರು ಜೀವ ಕಳೆದುಕೊಂಡಿರುವುದನ್ನು ನಮ್ಮ ವೃತ್ತಿ ಅನುಭವದಲ್ಲಿ ನೋಡಿದ್ದೇವೆ ಎಂದು ಹೇಳಿದರು.
ಗುಡ್ಡ ಪ್ರದೇಶಗಳಲ್ಲಿ ಮಳೆ ಬಂದ ವೇಳೆ ನೀರು ರಭಸವಾಗಿ ಹರಿಯುವುದು ಅಥವಾ ಭೂಕುಸಿತವಾಗುವ ಸಂದರ್ಭ ಹೆಚ್ಚಾಗಿರುತ್ತದೆ. ಆದಕ್ಕಾಗಿ ಯಾವುದೇ ಕಾರಣಕ್ಕೂ ಗುಡ್ಡ ಪ್ರದೇಶದಲ್ಲಿ ಇರುವಾಗ ತಗ್ಗು ಪ್ರದೇಶಗಳಿಗೆ ಬರಬಾರದು ಎಂದು ತಿಳಿಸಿದರು.
ನೆರೆಹಾನಿ ಸಂದರ್ಭಗಳಲ್ಲಿ ಆಳವಾದ ನೀರಿನಲ್ಲಿ ಸಿಲುಕಿಕೊಂಡ ವ್ಯಕ್ತಿಗಳನ್ನು ಹೊರತರುವುದು, ಭೂಕಂಪನ ಮತ್ತಿತರ ಕಾರಣಗಳಿಂದ ಕಟ್ಟಡಗಳು ಕುಸಿದ ವೇಳೆಯಲ್ಲಿ ಒಳಗೆ ಸಿಲುಕಿಕೊಂಡವರನ್ನು ಕಾಪಾಡಲು, ಅಗ್ನಿ, ವಿದ್ಯುತ್ ಅವಘಡಗಳಿಂದ ಆಗುವ ಅನಾಹುತಗಳಿಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಎಸ್ಪಿ ಪಿ.ಪಾಪಣ್ಣ, ಸಿಪಿಐ ಬಿ.ಜಿ.ಶಂಕ್ರಪ್ಪ, ಆರ್‌ಪಿಐ ಬಿ.ಪರಶುರಾಮ್, ಆರ್‌ಎಸ್‌ಐ ಮಂಜುನಾಥ್, ದಾವಣಗೆರೆಯ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಆರ್‌ಎಸ್‌ಐ ಸಂಗಮೇಶ್ ಎಸ್.ಇಂಗಳಗೇರಿ, ಸಿಬ್ಬಂದಿ ಹಾಲೇಶ್, ಮಂಜುನಾಥ್, ಕಿರಣ್‌ಕುಮಾರ್, ರುದ್ರಮುನಿ ಹಾಗೂ ಸೇವಾನಿರತ ಪ್ರಶಿಕ್ಷಣಾರ್ಥಿಗಳಿದ್ದರು.