ಶಿಥಿಲಾವಸ್ಥೆ ಕಟ್ಟಡ ತೆರವಿಗೆ ಸಂಬಂಧಿಸಿದ ತುರ್ತು ಸಭೆ

11blrp1
Published on

ಬೇಲೂರು: ಖಾಸಗಿಯವರಿಗೆ ಸೇರಿದ ಶಿಥಿಲವಾಗಿದ್ದ ವಾಣಿಜ್ಯ ಕಟ್ಟಡದ ಸಜ್ಜಾ ಭಾನುವಾರ ಕುಸಿದು ಇಬ್ಬರು ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಸೂಕ್ತ ಪರಿಹಾರವನ್ನು ಕಟ್ಟಡ ಮಾಲೀಕರಿಂದಲೇ ಕೊಡಿಸಬೇಕೆಂದು ಪುರಸಭೆಯ ತುರ್ತು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಪಟ್ಟಣದ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ಬಿ.ಸಿ.ಜಗದೀಶ್, ಜಮಾಲೂದ್ದೀನ್ ಹಾಗೂ ಪಿ.ಶೈಲೇಶ್ ಈ ದುರಂತ ನಮ್ಮೆಲ್ಲರಿಗೂ ನೋವು ತಂದಿದೆ. ಸುಮಾರು 30 ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, ಇದನ್ನು ತೆರವು ಮಾಡದೆ ಇಷ್ಟು ವರ್ಷ ಅದರಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಮಾಲೀಕರ ನಿರ್ಲಕ್ಷೃವೇ ಕಾರಣ. ಖಾಸಗಿಯವರಿಗೆ ಸೇರಿದ ಈ ಜಾಗ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಆ ಕಟ್ಟಡ ಶಿಥಿಲವಾಗಿ ವ್ಯಾಪಾರ ವಹಿವಾಟು ನಡೆಸಲು ಯೋಗ್ಯವಾಗಿಲ್ಲ. ಈ ಪ್ರಕರಣದಲ್ಲಿ ಪ್ರಾಣಹಾನಿ ಆದವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಇನ್ನು ಗಾಯಗೊಂಡು ಆಸ್ಪತ್ರೆಯಲ್ಲಿರುವವರ ಚಿಕಿತ್ಸೆಗೆ 2.50 ಲಕ್ಷ ರೂ. ಪರಿಹಾರ ನೀಡಿದ ನಂತರ ಕಟ್ಟಡ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಶಾಸಕರು ಕೂಡ ಸದನದಲ್ಲಿ ಮಾತನಾಡಿದ್ದು, ಅವಘಡ ಸಂಭವಿಸಿದಾಗ ಸಂಸದರು, ಶಾಸಕರು ಅಧಿಕಾರಿಗಳು ಆಗಮಿಸಿ ಇಲ್ಲಿನ ಸಮಸ್ಯೆ ವೀಕ್ಷಿಸಿದ್ದಾರೆ. ಇಂತಹ ಘಟನೆ ಮುಂದೆ ನಡೆಯಬಾರದು. ಈ ಕಟ್ಟಡಗಳಿಂದ ಪುರಸಭೆಗೆ ಆದಾಯ ಬಾರದೆ ಸಾಕಷ್ಟು ನಷ್ಟವಾಗಿದೆ. ಖಾಸಗಿ ವ್ಯಕ್ತಿಯವರೇ ಪರಿಹಾರ ನೀಡಬೇಕು. ಅಲ್ಲದೆ, ಪುರಸಭೆ ಹಾಗೂ ಸಂಘ- ಸಂಸ್ಥೆಗಳ ಜತೆ ಸೇರಿ ನಾವು ಜಾಥಾದ ಮೂಲಕ ದೇಣಿಗೆ ಸಂಗ್ರಹಿಸಿ ಸಾವಿಗೀಡಾಗಿರುವ ಹಾಗೂ ಗಾಯಗೊಂಡವರ ಕುಟುಂಬಕ್ಕೆ ಸಹಕಾರ ನೀಡುವ ಕಾರ್ಯ ಮಾಡಬೇಕು ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಕಟ್ಟಡ ಹಳೆಯದಾಗಿ ಸಜ್ಜಾ ಕುಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನುಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದು ಗಂಭೀರ ವಿಷಯವಾಗಿದ್ದರಿಂದ ನಾವು ಅವರಿಗೆ ಪರಿಹಾರ ಹೇಗೆ ಕೊಡಬೇಕು ಎಂದು ಚರ್ಚಿಸಲು ಪುರಸಭೆಯಿಂದ ತುರ್ತು ಸಭೆ ಕರೆಯಲಾಗಿದೆ. ಸರ್ಕಾರದ ಮಟ್ಟದಲ್ಲಿ ಅವರಿಗೆ ನೆರವು ನೀಡುವ ಕೆಲಸ ಆಗಬೇಕಿದೆ. ಕುಸಿದ ಸಜ್ಜಾ ಪುರಸಭೆಗೆ ಸೇರಿಲ್ಲ. ಮೃತಪಟ್ಟವರು ಬೇಲೂರಿನವರೇ ಆಗಿದ್ದರಿಂದ ಜಾಗದ ಮಾಲೀಕರನ್ನು ಕರೆಸಿ ಪರಿಹಾರ ಕೊಡಿಸುವ ಕೆಲಸ ಆಗಬೇಕಿದೆ. ಈ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಬೇಕು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈಗಾಗಲೇ ಶಾಸಕರು 50 ಲಕ್ಷ ರೂ. ಪರಿಹಾರಕ್ಕೆ ಸದನದಲ್ಲಿ ಒತ್ತಾಯಿಸಿದ್ದಾರೆ. ಪುರಸಭೆಯಿಂದ 50 ಸಾವಿರ ರೂ. ನೀಡಲಾಗಿದೆ. ಇನ್ನು ಕಟ್ಟಡ ಹಿಂದೆ ಇದ್ದ ಹಳೆಯ ಚಿತ್ರಮಂದಿರ ಅನೈತಿಕ ಚಟುವಟಿಕೆ ಹಾಗೂ ಮದ್ಯ ವ್ಯಸನಿಗಳ ತಾಣವಾಗಿದೆ. ಈಗಿರುವ ಚನ್ನಕೇಶವ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ರಂಗಮಂದಿರ ಸಹ ಶಿಥಿಲಾವಸ್ಥೆಯಲ್ಲಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದರು. ಪುರಸಭೆ ಉಪಾಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಸುಜಯ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net