

ಕಲಘಟಗಿ: ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ಲಾಭಕ್ಕೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ವಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಿ, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಪಟ್ಟಣದ ಹನ್ನೆರಡು ಮಠದ ಸಭಾಂಗಣದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷದ ಕರಾಳ ಇತಿಹಾಸ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.
1975ರ ತುರ್ತು ಪರಿಸ್ಥಿತಿ ಭಾರತೀಯ ಪ್ರಜಾಪ್ರಭುತ್ವದ ಘೋರ ಅಧ್ಯಾಯ. ಪ್ರಜಾಪ್ರಭುತ್ವದ ಮೇಲೆ ನಡೆದ ಅಪಚಾರದ ಕರಾಳ ನೆನಪುಗಳು ಇಂದಿನ ಜನತೆಗೆ ತಿಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತುರ್ತು ಪರಿಸ್ಥಿತಿಯಲ್ಲಿ ನ್ಯಾಯಾಂಗದ ಮೇಲೆ ಸರ್ಕಾರದ ನಿಯಂತ್ರಣ ಇತ್ತು. ಲಕ್ಷಾಂತರ ಜನರ ಬಂಧನ ಮಾಡಿದ್ದು ಇಂದಿರಾ ಗಾಂಧಿಯವರು. ಇವತ್ತು ಸಂವಿಧಾನದ ಬಗ್ಗೆ ಮಾತನಾಡುವ ಒಬ್ಬ ಕಾಂಗ್ರೆಸ್ಸಿಗರು, ಅಂದು ಮಾತನಾಡಲಿಲ್ಲ. ಲಕ್ಷಾಂತರ ಜನ ಹೋರಾಟದ ಫಲವಾಗಿ ಇಂದು ದೇಶ ಉಳಿದಿದೆ ಎಂದರು.
ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಮಾತನಾಡಿ, ಬಿಜೆಪಿಯ ಕಾರ್ಯಕರ್ತರನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸಚಿವ ಸಂತೋಷ ಲಾಡ್ ಅವರು ತಮ್ಮ ಕ್ಷೇತ್ರದಲ್ಲಿ ಸಾಗರದಷ್ಟು ಸಮಸೆಗಳಿದ್ದರೂ ಕೇಂದ್ರದ ಬಗ್ಗೆ ಮಾತನಾಡುತ್ತಾರೆ. ಮೊದಲು ಜಿಲ್ಲೆ ಹಾಗೂ ನಿಮ್ಮ ಕ್ಷೇತ್ರದ ಬಗ್ಗೆ ಗಮನಹರಿಸಿ. ನಂತರ ಮೋದಿ ಬಗ್ಗೆ ಮಾತನಾಡಿ ಎಂದು ಸಚಿವ ಸಂತೋಷ ಲಾಡ್ ವಿರುದ್ಧ ಹರಿಹಾಯ್ದರು.
ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಯಲ್ಲಾರಿ ಶಿಂಧೆ, ಷಣ್ಮುಖ ಗುರಿಕಾರ, ಮಹೇಂದ್ರ ಕೌತಾಳ, ಬಸವರಾಜ ಕುಂದಗೋಳಮಠ, ಜಯತೀರ್ಥ ಕಟ್ಟಿ, ಈರಣ್ಣ ಜಡಿ, ಐ.ಸಿ ಗೋಕುಲ, ಸದಾನಂದ ಚಿಂತಾಮಣಿ, ಫಕೀರೇಶ ನೇಸರೇಕರ್, ಅಣ್ಣಪ್ಪ ಓಲೇಕಾರ, ಶಿವಲಿಂಗಪ್ಪ ಯಲಿವಾಳ, ಬಸವರಾಜ ಶೇರವಾಡ, ಸುರೇಶ ಶೀಲವಂತರ, ವೈ.ಎನ್. ಪಾಟೀಲ, ಚಂದ್ರಗೌಡ ಪಾಟೀಲ, ಪಪಂ ಸದಸ್ಯರು, ಜಿಪಂ, ತಾಪಂ ಮಾಜಿ ಸದಸ್ಯರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.