

ಮಂಡ್ಯ: ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ಬಂದ ತುರ್ತು ಪರಿಸ್ಥಿತಿ ಭಾರತದ ಪಾಲಿಗೆ ಕರಾಳ ಅಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್ ಟೀಕಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಸಮಿತಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ 50-ಬಿಜೆಪಿಯಿಂದ ಕರಾಳದಿನ ಆಚರಣೆ ಹಾಗೂ ಜೈಲು ಸೇರಿದ್ದವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನಕ್ಕೆ ಕಪ್ಪುಚುಕ್ಕೆ ಬರೆದ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದೆ. ಭಾರತೀಯ ನಾಗರಿಕರ ಮೇಲೆ ಹೇರಿದ ತುರ್ತು ಪರಿಸ್ಥಿತಿ ಜಗತ್ತೇ ಅಚ್ಚರಿಪಡುವಂತೆ ಮಾಡಿದ ದಿನವನ್ನು ಯಾರೂ ಮರೆಯಲಾರರು ಎಂದು ನುಡಿದರು.
ಅಂದು ರಾಷ್ಟ್ರಪತಿ ಮೂಲಕ ಬಲವಂತದಿಂದ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ವಿಪಕ್ಷದ ನೂರಾರು ನಾಯಕರನ್ನು ಬಂಧನದಲ್ಲಿ ಇಡಲಾಗಿತ್ತು. ವಾಜಪೇಯಿ, ಮುರಾರ್ಜಿ ದೇಸಾಯಿ, ಎಲ್.ಕೆ.ಅಡ್ವಾಣಿ, ಎಚ್.ಡಿ.ದೇವೇಗೌಡ ಸೇರಿದಂತೆ ಹಲವರ ಬಂಧನವಾಗಿತ್ತು. ಹಲವಾರು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ವೇತನವನ್ನು ಕಡಿತಗೊಳಿಸಲಾಗಿತ್ತು. ತುರ್ತು ಪರಿಸ್ಥಿತಿ ಅವಧಿಯಲ್ಲಿ ದೇಶದ ಜನತೆ ಸಾಕಷ್ಟು ಕಷ್ಟಪಟ್ಟರು. ಬಲಾಢ್ಯ ರಾಜಕೀಯ ಕುಟುಂಬದ ಅಕ್ಷರಶಃ ಅಧಿಕಾರದ ದುರುಪಯೋಗದ ಪರಮಾವಧಿ ಇದಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ’ತುರ್ತು ಪರಿಸ್ಥಿತಿ’ ಎನ್ನುವ ಕಪ್ಪುಚುಕ್ಕೆ ಇಟ್ಟಿದ್ದರು ಎಂದರು.
ಬಿಜೆಪಿ ಮುಖಂಡ ವಕೀಲ ಕ್ರಾಂತಿ ಮಂಜು ಮಾತನಾಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ನಗರ ಮೋರ್ಚಾ ಅಧ್ಯಕ್ಷ ವಸಂತಕುಮಾರ್, ಮದ್ದೂರು ಕೆಂಪಬೋರಯ್ಯ, ದೊರೆಸ್ವಾಮಿ ಇತರರಿದ್ದರು. ಇದೇ ಸಂದರ್ಭದಲ್ಲಿ ಅಂದಿನ ತುರ್ತುಪರಿಸ್ಥಿತಿ ವಿರೋಧಿಸಿ ಜೈಲು ಸೇರಿದ ಹೋರಾಟಗಾರರನ್ನು ಅಭಿನಂದಿಸಲಾಯಿತು.