

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನಿಗೆ ಶಾಸ್ತ್ರೋಕ್ತವಾದ ಉತ್ತಮ ಸಂಸ್ಕಾರಗಳನ್ನು ನಿರಂತರ ನೀಡುವುದರಿಂದ ಸಂಸ್ಕೃತಿಯಲ್ಲಿ ನಿಶ್ಚಿತವಾಗಿ ಉತ್ಥಾನವಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಕುರಬಗಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ವೀರಶೈವ ಜಂಗಮ ಸಂಸ್ಥೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಆಯೋಜಿಸಿದ್ದ ಶ್ರೀಶೈಲ ಜಗದ್ಗುರುಗಳ 12ನೇ ವರ್ಷದ ಪೀಠಾರೋಹಣದ ನೆನಪಿಗೆ ವೀರಶೈವ ಜಂಗಮ ಸಂಸ್ಥೆ ನೀಡಿರುವ ದತ್ತಿ ನಿಧಿಯ ಪ್ರಥಮ ಉಪನ್ಯಾಸ ಉದ್ಘಾಟನೆ ಹಾಗೂ ಧರ್ಮ ಜಾಗೃತಿ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮ ಪಾಲನೆಯಿಂದ ಮಾತ್ರ ಸುಸಂಸ್ಕೃತ ಸಮಾಜ ರೂಪುಗೊಳ್ಳಲು ಸಾಧ್ಯ. ಎಲ್ಲ ಪೀಠ, ಮಠಗಳು ಧರ್ಮ ಮಾರ್ಗ ಬೋಧಿಸುವ ಕಾರ್ಯ ಮಾಡುತ್ತಿವೆ. ಅತಿ ಲೋಭಿತನ ಬಿಟ್ಟು, ಅಗತ್ಯವಿರುವಷ್ಟು ಪಡೆದು ಬದುಕು ರೂಪಿಸಿಕೊಂಡಾಗ ನೆಮ್ಮದಿ ಬದುಕು ದೊರಕುತ್ತದೆ ಎಂದರು.
ಕೆಲ ದುಷ್ಟ ಶಕ್ತಿಗಳು ವೀರಶೈವ ಲಿಂಗಾಯತ ಸಮಾಜ ಒಡೆಯುವ, ಹಾಳು ಮಾಡುವ ದುಸ್ಸಾಹಸಕ್ಕೆ ಪ್ರಯತ್ನ ಮಾಡುತ್ತಿವೆ. ಆದರೆ ಈವರೆಗೂ ಕೈಗೂಡಿಲ್ಲ. ಮುಂದಿನ ದಿನಗಳಲ್ಲೂ ಇದಕ್ಕೆ ಅವಕಾಶ ನೀಡುವುದಿಲ್ಲ. ಅನಾದಿಕಾಲದಿಂದಲೂ ಪಂಚಚಾರ್ಯರು ಸಾಮಾಜಿಕ ಬದಲಾವಣೆಗೆ, ಧಾರ್ಮಿಕ ಜಾಗೃತಿಗೆ ಸದಾ ಸಂಚರಿಸಿ ವೀರಶೈವ ಧರ್ಮ ಸ್ಥಾಪಿಸಿ ಬೆಳೆಸಿದ್ದಾರೆ. ವೀರಶೈವ ಲಿಂಗಾಯತ ಧರ್ಮಕ್ಕೆ, ಭಕ್ತರಿಗೆ ಕಷ್ಟ ಬಂದಾಗ ಪಂಚಪೀಠಗಳು ಮುಂಚೂಣಿಯಲ್ಲಿದ್ದು ಅಗತ್ಯ ಮಾರ್ಗದರ್ಶನ, ಬೆಂಬಲ ನೀಡುತ್ತಿವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಶಂಭುಲಿಂಗ ಸ್ವಾಮೀಜಿ, ಬಸವರಾಜ ವಕ್ಕುಂದ, ಡಾ.ಎಸ್.ಆರ್. ರಾಮನಗೌಡರ, ಎಸ್.ಎಫ್. ಸಿದ್ದನಗೌಡರ, ಮೃತ್ಯುಂಜಯ ಕೋರಿಮಠ ಮಾತನಾಡಿದರು. ವಿಶ್ರಾಂತ ಪ್ರಧ್ಯಾಪಕ ಡಾ.ಜೆ.ಎಂ.ನಾಗಯ್ಯ ವಿಶೇಷ ಉಪನ್ಯಾಸ ನೀಡಿದರು. ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಪೂರ್ವ ಗ್ರಾಮದ ಪ್ರಮುಖ ಓಣಿಗಳಲ್ಲಿ ಶ್ರೀಗಳನ್ನು ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಡಾ. ಸುಜಾತಾ ಹಸವಿಮಠ, ಪ್ರೊ.ಜಗದೀಶ ಕಾಡದೇವರಮಠ, ಡಾ.ಎಸ್.ಜಿ.ಮಠದ, ಬಸಯ್ಯ ಶಾಸ್ತ್ರಿ ಹಿರೇಮಠ, ಪಂಚಾಕ್ಷರಯ್ಯ ಹಿರೇಮಠ, ಚನ್ನಪ್ಪ ಬ್ಯಾಳಿ, ತಮ್ಮಣ್ಣ ಗುಂಡಗೋವಿ, ಈರಯ್ಯ ಹಿರೇಮಠ ಇತರರು ಇದ್ದರು.
ಬಸವರಾಜ ಕೌಜಲಗಿ ಸ್ವಾಗತಿಸಿದರು. ಡಾ.ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ. ಹಿರೇಮಠ ಹಾಗೂ ಪ್ರಭು ಕೆಂಡದಮಠ ನಿರೂಪಿಸಿದರು. ಶಿವಾನಂದ ಗುಂಡಗೋವಿ ವಂದಿಸಿದರು.