

ಎನ್.ಮುನಿವೆಂಕಟೇಗೌಡ ಕೋಲಾರ
ಹೆಣ್ಣು ಕರುಗಳ ಸಂತತಿ ಹೆಚ್ಚಿಸಿ ಹೈನೋದ್ಯಮವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಸಂತಾನೋತ್ಪತ್ತಿಗಾಗಿ ಎಂಬ್ರಿಯೋ ಟ್ರಾನ್ಸಫರ್ ಟೆಕ್ನಾಲಜಿಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮ ಮತ್ತು ಕೆಎಂಎಫ್ ಹಾಗೂ ಕೋಲಾರ ಹಾಲು ಒಕ್ಕೂಟದಿಂದ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ಸೀಮೆ ಹಸುಗಳಿಗೆ ಹೆಣ್ಣು ಭ್ರೂಣ ಸಂತಾನೋತ್ಪತ್ತಿಗಾಗಿ 7 ದಿನದ ಭ್ರೂಣವನ್ನೇ ಹಸುಗಳ ಗರ್ಭಕ್ಕೆ ನೀಡುವ ವಿಶೇಷ ಯೋಜನೆಗೆ ಚಾಲನೆ ನೀಡಲಾಯಿತು.
ಈ ಮೊದಲು, ಹಸುಗಳು ಫಲಕ್ಕೆ ಬಂದಾಗ ವೈದ್ಯರು ಹೆಣ್ಣು ಕರುಗಳಿಗೆಂದು ವಿಶಿಷ್ಟ ವೀರ್ಯನೆಲೆ (ಸೆಮೆನ್) ನೀಡುತ್ತಿದ್ದರು. ಆದರೆ ಕೆಲವೊಮ್ಮೆ ಭ್ರೂಣ ಕಚ್ಚುತ್ತಿರಲಿಲ್ಲ. ಒಮ್ಮೊಮ್ಮೆ ಭ್ರೂಣ ಕಚ್ಚಿದರೂ ಹಸುಗಳು ಗಂಡು ಕರುಗಳಿಗೆ ಜನ್ಮ ನೀಡುತ್ತಿದ್ದವು. ರೈತರಿಗೆ ಉಪಯೋಗಕ್ಕೆ ಬಾರದ ಕಾರಣ ಕರು ಜನಿಸಿದ ಕೆಲವೇ ದಿನಗಳಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮ ಮತ್ತು ಕೆಎಂಎಫ್ ಹೊಸ ಆವಿಷ್ಕಾರ ಮಾಡಿ ಎಂಬ್ರಿಯೋ ಟ್ರಾನ್ಸಫರ್ ಟೆಕ್ನಾಲಜಿ ಮೂಲಕ ಪ್ರಾಯೋಗಿಕವಾಗಿ ಅರಾಭಿಕೊತ್ತನೂರು ಪಶು ವೈದ್ಯ ಆಸ್ಪತ್ರೆ ವ್ಯಾಪ್ತಿಯ 20 ಹಸುಗಳ ಮೇಲೆ ಪ್ರಯೋಗ ಮಾಡಿ ಹೆಣ್ಣು ಕರುಗಳ ಸಂತತಿ ಹೆಚ್ಚಿಸಲು ಮುಂದಡಿ ಇಟ್ಟಿದೆ.
ಕಾರ್ಯವಿಧಾನ ಹೇಗೆ?
ಮೊದಲಿಗೆ ಗರ್ಭ ಧರಿಸಲು ಯೋಗ್ಯವಿರುವ ಹಸುಗಳನ್ನು ಆಯ್ಕೆ ಮಾಡಿ ಪ್ರಥಮವಾಗಿ ವಿಶೇಷ ಚುಚ್ಚು ಮದ್ದು ನೀಡಲಾಗುವುದು. ಒಂದು ವಾರದ ನಂತರ ಹಸು ಫಲಕ್ಕೆ ಬಂದಾಗ ಆಧುನಿಕ ತಂತ್ರಜ್ಞಾನದ ಮೂಲಕ ಹೆಣ್ಣು ಭ್ರೂಣದ 7 ದಿನದ ಭ್ರೂಣವನ್ನು ಹಸುಗಳ ಗರ್ಭಕ್ಕೆ ನೀಡಲಾಗುತ್ತಿದೆ. ಇದರಿಂದ ಎಲ್ಲ ಹಸುಗಳಿಗೂ ಗರ್ಭ ಕಟ್ಟಿ ಭ್ರೂಣ ಬೆಳವಣಿಗೆಯಾಗುತ್ತದೆ. ಹೆಣ್ಣು ಕರುವಿಗೆ ಜನ್ಮ ನೀಡುತ್ತವೆ. ಇದರಿಂದ ಸೀಮೆ ಹಸುಗಳ ಸಂತಾನೋತ್ಪತ್ತಿ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಲಿದೆ.
26 ಸಾವಿರ ರೂ. ವೆಚ್ಚ: ಆಧುನಿಕ ತಂತ್ರಜ್ಞಾನದ ಮೂಲಕ ಉತ್ಪಾದಿಸುವ ಭ್ರೂಣವೊಂದಕ್ಕೆ 26 ಸಾವಿರ ರೂ. ವೆಚ್ಚ ತಗುಲುತ್ತದೆ. ಆದರೆ, ಅದನ್ನು ಕೆಎಂಎಫ್ ಭರಿಸಲಿದ್ದು, ಹಸುಗಳು ಭ್ರೂಣದ ಫಲದಿಂದ ಹೆಣ್ಣು ಕರುವಿಗೆ ಜನ್ಮ ನೀಡಿದರೆ ರೈತರಿಂದ ಒಂದು ಸಾವಿರ ರೂ. ತೆಗೆದುಕೊಳ್ಳಲಾಗುತ್ತದೆ.
"ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮ ಮತ್ತು ಕೆಎಂಎಫ್ ಹಾಗೂ ಕೋಲಾರ ಹಾಲು ಒಕ್ಕೂಟದಿಂದ ಹೆಣ್ಣು ಭ್ರೂಣ ಸಂತಾನೋತ್ಪತ್ತಿಗಾಗಿ ಎಂಬ್ರಿಯೋ ಟ್ರಾನ್ಸಫರ್ ಟೆಕ್ನಾಲಜಿಯನ್ನು ರಾಜ್ಯದಲ್ಲಿ ಪ್ರಥಮವಾಗಿ ಪ್ರಯೋಗ ಮಾಡಲು ಮುಂದಾಗಿದ್ದು, ಪಶು ಇಲಾಖೆಯ ಸಹಕಾರವೂ ಇದೆ."
-ಡಾ.ಜಿ.ಎಂ.ರಮೇಶ್
ಉಪ ನಿರ್ದೇಶಕರು, ಪಶು ಇಲಾಖೆ, ಕೋಲಾರ
"ಎಂಬ್ರಿಯೋ ಟ್ರಾನ್ಸಫರ್ ಟೆಕ್ನಾಲಜಿಯಿಂದ ರಾಜ್ಯದಲ್ಲೇ ಪ್ರಥಮವಾಗಿ ಪ್ರಾಯೋಗಿಕವಾಗಿ ಹಸುಗಳಿಗೆ ಹೆಣ್ಣು ಭ್ರೂಣ ನೀಡುವ ಪ್ರಯೋಗ ಮಾಡಿದ್ದಾರೆ. ಹೆಣ್ಣು ಕರುಗಳ ಸಂತತಿ ಹೆಚ್ಚಾದಂತೆ ಹೈನೋದ್ಯಮವು ಹೆಚ್ಚಾಗುತ್ತದೆಂದು ಹೊಸ ಪ್ರಯೋಗಕ್ಕೆ ಮುಂದಾಗಲಾಗಿದೆ. ಒಂದೊಂದೇ ಹಸುವಿಗೆ ಭ್ರೂಣ ನೀಡಲು ಸಾಧ್ಯವಿಲ್ಲ. ಕನಿಷ್ಠ 20 ಹಸುಗಳನ್ನು ಕ್ರೋಡಿಕರಿಸಿ ನೀಡಬೇಕಾಗುತ್ತದೆ. ಇದನ್ನು ಅರಾಭಿಕೊತ್ತನೂರು ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಇದು ಯಶಸ್ಸು ಕಂಡರೆ ಜಿಲ್ಲೆಯಾದ್ಯಂತ ಮುಂದುವರಿಯಲಿದೆ."
-ಡಾ. ನಿತಿನ್, ಅರಾಭಿಕೊತ್ತನೂರು ಪಶು ವೈದ್ಯರು
"ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮ ಮತ್ತು ಕೆಎಂಎಫ್ ಹಾಗೂ ಕೋಲಾರ ಹಾಲು ಒಕ್ಕೂಟದಿಂದ ಹೆಣ್ಣು ಕರುಗಳ ಸಂತಾನೋತ್ಪತ್ತಿಗಾಗಿ ಎಂಬ್ರಿಯೋ ಟ್ರಾನ್ಸಫರ್ ಟೆಕ್ನಾಲಜಿಯನ್ನು ಪ್ರಪ್ರಥಮವಾಗಿ ಪ್ರಾಯೋಗಿಕವಾಗಿ ಕೋಲಾರದಲ್ಲಿ 24 ಹಸುಗಳಿಗೆ ನೀಡಲಾಗಿದೆ. ಸುಮಾರು 60 ಹಸುಗಳನ್ನು ಪರೀಕ್ಷಿಸಿ ಅದರಲ್ಲಿ 24 ಹಸುಗಳು ಗರ್ಭ ಧರಿಸಲು ಯೋಗ್ಯವಾದ ಕಾರಣ ಅವುಗಳ ಮೇಲೆ ಪ್ರಯೋಗ ಮಾಡಲಾಗಿದೆ."
-ಡಾ.ಚೇತನ್
ಕೋಲಾರ ಹಾಲು ಒಕ್ಕೂಟದ ವೈದ್ಯಾಧಿಕಾರಿ