ಹಿರಿಯ ಪತ್ರಕರ್ತರ ಆದರ್ಶ ಮೈಗೂಡಿಸಿಕೊಳ್ಳಿ

23sri-1
Published on

ಶೃಂಗೇರಿ: ಪತ್ರಕರ್ತರು ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅವರಿಗೆ ಗೌರವ ಸಿಗುತ್ತಿದೆ. ಹಿರಿಯ ಪತ್ರಕರ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಯತ್ನಕ್ಕೆ ನಾವು ಸ್ಪಂದಿಸಬೇಕು ಎಂದು ನವದೆಹಲಿ ಇಂಡಿಯನ್ ಫೆಡರೇಷನ್ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ವಿಜಯ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಸಣ್ಣ ಪತ್ರಿಕೆ ಸಂಘಗಳು, ರಾಷ್ಟ್ರವ್ಯಾಪ್ತಿಯಾಗಿ ಬಹಳಷ್ಟು ಸಂಖ್ಯೆಯಲ್ಲಿವೆ. ಆದರೆ ಸಂಘಗಳು ಸಕ್ರಿಯವಾಗಿದ್ದರೆ ಮಾತ್ರ ಸಮುದಾಯ ಗುರುತಿಸುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣಪತ್ರಿಕೆ ಸಂಪಾದಕರ ಸ್ಥಿತಿ ಏಕಪಾತ್ರಭಿನಯವಾಗಿದ್ದು, ಅವರ ಜೀವನ ನಿರ್ವಹಣೆ ಕಷ್ಟಕರ. ಪತ್ರಕರ್ತರಲ್ಲಿ ಏಕತೆ, ಒಗ್ಗಟ್ಟು ಇದ್ದಾಗ ಮಾತ್ರ ಸಂಘದ ಜತೆ ಪರ್ತಕರ್ತರಿಗೂ ಮಾನ್ಯತೆ ದೊರಕುತ್ತದೆ ಎಂದರು.

ಸಂಘದ ನೂತನ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ, ಪತ್ರಕರ್ತರ ಆರೋಗ್ಯ ರಕ್ಷಣೆ ಹಾಗೂ ಕುಟುಂಬ ನಿರ್ವಹಣೆಗೆ ಅವರು ಅರ್ಥಿಕವಾಗಿ ಸಬಲತೆ ಪಡೆದಿರುವ ಕಾರಣ ಮುಂಬರುವ ದಿನಗಳಲ್ಲಿ ಪತ್ರಕರ್ತರ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು. ಪತ್ರಕರ್ತರಿಗೆ ಸಮಸ್ಯೆಗಳು ಎದುರಾದಾಗ ಎಲ್ಲರೂ ಮಾನವೀಯತೆಯಿಂದ ಪರಿಶ್ರಮಿಸಬೇಕಿದೆ. ಅಜ್ಜಂಪುರ ಹಾಗೂ ಶೃಂಗೇರಿಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಕೂಡಲೇ ಕಾರ್ಯಪ್ರವೃತ್ತರಾಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಂಘದ ಕಾನೂನು ಸಲಹೆಗಾರ ಅಮೃತೇಶ್ವರ, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಆಗುಂಬೆ ಗಣೇಶ್ ಹೆಗಡೆ, ರಂಜಿತ್, ಸದಸ್ಯರಾದ ರಾಘವೇಂದ್ರ. ಕೆ.ಎನ್,ಗೋಪಾಲಕೃಷ್ಣ, ಅಭಿನವ್, ರಂಜಿತ್, ಸುಬ್ರಹ್ಮಣ್ಯ ಆಚಾರ್ಯ,ಗಿರಿಜಾ ಪ್ರಸಾದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net