

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲಿತರು, ಮಹಿಳೆಯರು ಹಾಗೂ ಕಾರ್ಮಿಕರ ಪರವಾಗಿ ಹೋರಾಡಿ, ಅವರು ಸಮಾಜದಲ್ಲಿ ನೆಮ್ಮದಿಯುತ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಡಾ.ಬಿ.ಅಂಬೇಡ್ಕರ್ ವಿಶ್ವಜ್ಞಾನಿ ಹಾಗೂ ವಿಶ್ವ ನಾಯಕರಾಗಿದ್ದಾರೆ ಎಂದರು.
ಅಂಬೇಡ್ಕರ್ ಅವರು ಇಡೀ ಜಗತ್ತು ಮೆಚ್ಚುವ ಸಂವಿಧಾನವನ್ನು ನೀಡಿದ್ದು, ಆ ಮೂಲಕ ಭಾರತದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ತಂದು ಕೊಟ್ಟಿದ್ದಾರೆ. ಅವರಿಗೆ ಬಡತನ ಹಾಗೂ ಅಸ್ಪೃಶ್ಯತೆ ಎರಡು ಕಾಡಿತ್ತು. ಅದೆಲ್ಲವನ್ನೂ ಮೆಟ್ಟಿನಿಂತು ಸಾಧನೆ ಮಾಡಿ ಇಂದು ಚರಿತ್ರೆಯಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅವರ ಬದುಕು ಹೋರಾಟ ಒಂದು ಮಹಾಕಾವ್ಯ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು.
ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಶಿವಕುಮಾರ್, ಹಣಕಾಸು ಅಧಿಕಾರಿ ರಮೇಶ್ ಇತರರಿದ್ದರು.