

ವಿಜಯಪುರ: ಜೀವನದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಮಾನವೀಯ ಮೌಲ್ಯಗಳಾದ ಸ್ನೇಹ, ಪ್ರೀತಿ, ಪರಸ್ಪರ ಹೊಂದಾಣಿಕೆ ಮೌಢ್ಯಗಳನ್ನು ಹೋಗಲಾಡಿಸುವುದರ ಅರಿವು ಬೆಳೆಸಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಬಿ.ಎಂ. ಅಡ್ಡೋಡಗಿ ಹೇಳಿದರು.
ಭಾನುವಾರ ನಗರದ ಹೊರವಲಯದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಹಾಸಿಗೆ ಇದ್ದಷ್ಟು ಕಾಲು ಚಾಚುವುದಕ್ಕಿಂತ ಹಾಸಿಗೆಯನ್ನೇ ದೊಡ್ಡದಾಗಿಸಿಕೊಳ್ಳಬೇಕು ಎಂದರು.
ನ್ಯಾಯವಾದಿ ಮಾಧವಿ ದೇಶಪಾಂಡೆ ಮಾತನಾಡಿ, ಜೀವನದ ಮೂರು ಮುಖ್ಯ ಸಂಪತ್ತುಗಳಾದ ತಾಯಿ ಪ್ರೀತಿ, ತಂದೆ ತ್ಯಾಗ ಹಾಗೂ ಗುರುವಿನ ಜ್ಞಾನದ ಮಹತ್ವ ಅರಿತು, ಧನಾತ್ಮಕ ಭಾವನೆ ರೂಢಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಕೆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂದೆ ತಾಯಿಯ ತ್ಯಾಗ, ಮಮತೆ, ಕಷ್ಟಗಳನ್ನು ಅರಿವಿನಲ್ಲಿಟ್ಟುಕೊಂಡು ಜ್ಞಾನಾರ್ಜನೆ ಮಾಡಬೇಕು ಎಂದು ತಂದೆ-ತಾಯಿಯ ಮಹತ್ವವನ್ನು ಮಾರ್ಮಿಕವಾಗಿ ವಿವರಿಸಿದರು.
ಸಂಸ್ಥೆ ನಿರ್ದೇಶಕರಾದ ಶಿವಲೀಲ ಶಿವಾನಂದ ಕೆಲೂರ, ದಯಾನಂದ ಎನ್. ಕೆಲೂರ, ಕಾರ್ಯದರ್ಶಿ ಎನ್.ಜಿ. ಯರನಾಳ, ಮುಖ್ಯಗುರು ರಾಜಶೇಖರ ವಿ.ಎಂ. ಹಾಗೂ ಶ್ರೀಶೈಲ ಹೆಗಳಾಡಿ, ಹಾಸ್ಟೇಲ್ ವಿಭಾಗ ಮುಖ್ಯಸ್ಥ ಶ್ರೀಶಾಂತ ಹೂಗಾರ, ಸಿಬ್ಬಂದಿ ಉಪಸ್ಥಿತರಿದ್ದರು. ಸಾಕ್ಷಿ ಬಾಗೇವಾಡಿ, ಸೋನಂ ಕೆಂಬಾವಿ ನಿರೂಪಿಸಿದರು.