

ಅರಕಲಗೂಡು : ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗದೆ ಉತ್ತಮ ಪುಸ್ತಕಗಳನ್ನು ಓದಿ ಗುಣಮಟ್ಟದ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಲು ಶ್ರಮಿಸಬೇಕು ಎಂದು ಹಾಸನ ಜಿಲ್ಲಾ ಲೋಕಾಯುಕ್ತ ಎಸ್‌ಪಿ ನಂದಿನಿ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಟೈಮ್ಸ್ ಹಾಸನ ಪಿಯು ಕಾಲೇಜು ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಫೇರ್ ವೆಲ್ ಪಾರ್ಟಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಬದುಕು ಶಿಕ್ಷಣದಿಂದ ಮಾತ್ರ ಬದಲಾವಣೆ ಕಾಣಲಿದ್ದು, ವಿದ್ಯೆ ವಿನಯದ ಜತೆಗೆ ಉತ್ತಮ ಸಂಸ್ಕಾರಗಳನ್ನೂ ಮೈಗೂಡಿಕೊಳ್ಳಬೇಕು. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲದೆ ಮಕ್ಕಳ ಕಲಿಕೆಗೆ ತೊಂದರೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಅನೇಕ ಸವಲತ್ತುಗಳು ಲಭ್ಯವಿದ್ದು ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ವಿದ್ಯೆ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದ ಪಾಲಕರು, ಗುರು ಹಿರಿಯರನ್ನು ಗೌರವಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿ, ಮಕ್ಕಳು ಮೊದಲು ಶಿಕ್ಷಣಕ್ಕಿರುವ ಶಕ್ತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಅಂಕಗಳಿಗೆಗಷ್ಟೆ ಸೀಮಿತಗೊಳ್ಳದೆ ಮಹತ್ತರವಾದ ಸಾಧನೆಗೆ ಮುಂದಾಗಬೇಕು. ಪುಸ್ತಕದ ಜ್ಞಾನದ ಜತೆಗೆ ಪರಿಸರ, ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಕೊಡುಗೆಯಾಗಬೇಕು ಎಂದರು.
ಬರಗೂರು ಮುರಾರ್ಜಿ ವಸತಿ ಶಾಲೆ ಶಿಕ್ಷಕ ಕೆ. ಸೋಮೇಶ್, ದೊಡ್ಡಮಗ್ಗೆಯ ನಿವೃತ್ತ ಸೈನಿಕ ಡಿ. ಕಾಳೇಗೌಡ, ಆಂಬುಲೆನ್ಸ್ ಚಾಲಕ ಜಿ.ದಿನೇಶ್, ಹೊನ್ನವಳ್ಳಿ ಗ್ರಾಮದ ಉತ್ತಮ ಕೃಷಿಕ ಪ್ರಕಾಶ್, ಪೌರಕಾರ್ಮಿಕ ಮಹಿಳೆ ರಾಹೇಲಮ್ಮ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಪಿ.ನವೀನ್ ಉಲಿವಾಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ರಾಕೇಶ್, ಸಾನಿಯಾ, ಕೃಷ್ಣಮೂರ್ತಿ, ಮಧು, ನಾಗೇಂದ್ರ, ಗೋಪಿನಾಥ್ ಇತರರಿದ್ದರು. ವಿದ್ಯಾರ್ಥಿಗಳು ಆಕರ್ಷಕವಾದ ವೇಷಭೂಷಣಗಳನ್ನು ತೊಟ್ಟು ವಿವಿಧ ಮನರಂಜನಾ ಕಾರ್ಯಕ್ರಮಗಳು ಪ್ರದರ್ಶಿಸಿ ರಂಜಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.