ಭಾಷಾಭಿಮಾನ ಜಾಗೃತಗೊಳ್ಳಲಿ

14 skp 1
Published on

ಸಕಲೇಶಪುರ : ಜನರಲ್ಲಿ ಕನ್ನಡ ಭಾಷಾಭಿಮಾನ ಜಾಗೃತಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನದ ಪಾತ್ರ ಬಹು ದೊಡ್ಡದು ಎಂದು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ಹೇಳಿದರು.
ಹೆತ್ತೂರು ಗ್ರಾಮದಲ್ಲಿ ಗುರುವಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡದ ವೈಶಿಷ್ಟ್ಯದ ಬಗ್ಗೆ ಅರಿವು ಮೂಡಿಸಿ, ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಸಾಪ ಕೆಲಸ ಮಾಡುತ್ತಿದೆ. ಜಿಲ್ಲಾ ಮಟ್ಟದ 22ನೇ ಸಾಹಿತ್ಯ ಸಮ್ಮೇಳನವನ್ನು ಹೆತ್ತೂರು ಗ್ರಾಮದಲ್ಲಿ ಮಾ. 23 ಹಾಗೂ 24 ರಂದು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೊಡಿಸುವ ಮೂಲಕ ಭಾಷಾಭಿಮಾನ ಮೆರೆಯಬೇಕು ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನ ಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಸಮ್ಮೇಳನ ಯಶಗೊಳಿಸಲು ತನು,ಮನ, ಧನ ಅರ್ಪಿಸಿ ಕೆಲಸ ಮಾಡಲಾಗುವುದು ಎಂದರು. ತಾಲೂಕು ಕಸಾಪ ಅಧ್ಯಕ್ಷೆ ಶಾರದಾ ಗುರುಮೂರ್ತಿ ಮಾತನಾಡಿ, ಜಿಲ್ಲಾ ಮಟ್ಟದ ಸಮ್ಮೇಳನ ನಡೆಸುವುದಕ್ಕೆ ಘಟಕ ಸಮರ್ಥವಾಗಿದೆ. ಕಸಾಪ ಪದಾಧಿಕಾರಿಗಳು, ಗ್ರಾಮಸ್ಥರು ಬೆಂಬಲಿಸಬೇಕು ಎಂದರು.
ಹೆತ್ತೂರು ಗ್ರಾಪಂ ಅಧ್ಯಕ್ಷ ನಾಗರಾಜ್, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಬೊಮ್ಮೆಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮದನ್ ಗೌಡ, ಹೆತ್ತೂರು ಹೋಬಳಿ ಅಧ್ಯಕ್ಷ ರವಿ ಕುಮಾರ್, ಶಂಕರ್, ನೇತ್ರಾವತಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net