ಶೃಂಗಾರಗೊಂಡ ಬ್ಯಾಡಗಿ ಎಪಿಎಂಸಿ

Byadagi APMC
Published on

ಬ್ಯಾಡಗಿ: ಮೆಣಸಿನಕಾಯಿ ವ್ಯಾಪಾರಕ್ಕೆ ವಿಶ್ವದಲ್ಲಿಯೇ ವಿಶಿಷ್ಟ ಛಾಪು ಮೂಡಿಸಿದ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಕಟ್ಟಡವನ್ನು 80 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ದುರಸ್ತಿಗೊಳಿಸಲಾಗಿದ್ದು, ಇಷ್ಟರಲ್ಲಿಯೇ ಆಡಳಿತ ಸಿಬ್ಬಂದಿ ಮೂಲ ಕಚೇರಿಗೆ ತೆರಳಲಿದ್ದಾರೆ.

ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕುಸಿತಗೊಂಡಿದೆ ಎಂದು ಆಕ್ರೋಶಗೊಂಡ ರೈತರು ಮಾ. 11ರಂದು ಇಲ್ಲಿನ ಆಡಳಿತ ಕಚೇರಿ ಮೇಲೆ ಕಲ್ಲೆಸೆದು ಏಳು ವಾಹನಗಳನ್ನು ಸುಟ್ಟುಹಾಕಿ, 2 ಕೋಟಿ ರೂ.ಗೂ ಅಧಿಕ ಹಾನಿಗೊಳಿಸಿದ್ದರು. ಪರಿಣಾಮ 7 ತಿಂಗಳಿಂದ ಹಾಳುಬಿದ್ದಿದ್ದ ಕಟ್ಟಡವನ್ನು ಇದೀಗ ಮರುನಿರ್ವಣ ಮಾಡಲಾಗಿದೆ.

1940 ದಶಕದಲ್ಲಿ ಆರಂಭವಾದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆಡಳಿತ ಕಚೇರಿಯನ್ನು ಅಂದಿನ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ನಿರ್ವಿುಸಲಾಗಿತ್ತು. ವಜ್ರದುಂಡಿಯ ಕಲ್ಲುಗಳಿಂದ ಗುಣಮಟ್ಟವಾಗಿ ನಿರ್ವಿುಸಿದ ಹಳೆಯ ಕಟ್ಟಡ ಇಂದಿಗೂ ತನ್ನ ಹೊಳಪು ಕಳೆದುಕೊಂಡಿಲ್ಲ. ಮಾರುಕಟ್ಟೆ ವಹಿವಾಟು, ರೈತರ ಸಂಖ್ಯೆ ಹೆಚ್ಚಾದ ಪರಿಣಾಮ ನಾಲ್ಕಾರು ವರ್ಷದ ಹಿಂದೆ 3 ಕೋಟಿ ರೂ. ವೆಚ್ಚದ ಹೊಸ ಕಚೇರಿ ನಿರ್ವಿುಸಲಾಗಿತ್ತು. ಆದರೆ, ಮಾ. 11ರಂದು ಜರುಗಿದ ದುರ್ಘಟನೆಯ ಬಳಿಕ ಹಳೆಯ ಕಚೇರಿಗೆ ತೆರಳಲಾಗಿತ್ತು. ಹಾನಿಗೊಂಡ ಕಟ್ಟಡ ಪುನರ್ ದುರಸ್ತಿಗೊಂಡು ಇದೀಗ ಮೊದಲಿನಂತೆ ಅಲಂಕೃತಗೊಂಡಿದೆ.

ಕಿಡಿಗೇಡಿ ರೈತರಿಂದ ಧ್ವಂಸ:

ದೇಶದಲ್ಲಿ ರುಚಿ, ಶುಚಿ ಹಾಗೂ ಗುಣಮಟ್ಟದ ವ್ಯಾಪಾರದಿಂದಲೇ ಮೆಣಸಿನಕಾಯಿ ವ್ಯಾಪಾರ ಸಾಗರದಾಚೆಗೂ ವ್ಯವಹಾರ ನಡೆಸುತ್ತಿದೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮಾ. 11ರಂದು ಇದ್ದಕ್ಕಿದ್ದಂತೆ ಕಿಡಿಗೇಡಿ ರೈತರು ಕ್ಷಣಾರ್ಧದಲ್ಲಿ ಕಚೇರಿಯ ಒಳಗೆ ನುಗ್ಗಿ ಸಂಪೂರ್ಣವಾಗಿ ಒಡೆದು ಹಾಕಿದರು. ಕಚೇರಿಯ ಆವರಣದಲ್ಲಿ ನಿಲ್ಲಿಸಿದ್ದ ಏಳು ವಾಹನಗಳನ್ನು ಸುಟ್ಟು ಹಾಕಿದ್ದರು. ಮಹತ್ವದ ವಿಚಾರವೆಂದರೆ 75 ವರ್ಷಗಳ ಆಡಳಿತ ಕಚೇರಿಯ ಐತಿಹಾಸಿಕ ದಾಖಲೆಗಳನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಘಟನೆಯಲ್ಲಿ ಪೊಲೀಸರು, ಮಾಧ್ಯಮದವರು ಹಲ್ಲೆಗೊಳಗಾಗಿದ್ದರು ಕಚೇರಿ ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಪರದಾಡುವಂಥ ದುಸ್ಥಿತಿ ನಿರ್ವಣವಾಗಿತ್ತು.

ಮತ್ತೆ ಅರ್ಭಟಿಸುತ್ತಿವೆ ಜೋಡೆತ್ತು:

ಮೆಣಸಿನಕಾಯಿ ಮಾರುಕಟ್ಟೆಯ ಆಡಳಿತ ಕಚೇರಿಯ ಮುಂಭಾಗದಲ್ಲಿ ಆಕರ್ಷಣೀಯವಾಗಿ ಕಾಣುವಂತೆ ಅಮರಾವತಿ ತಳಿಯ ಜೋಡೆತ್ತು ಚಕ್ಕಡಿ ಎಳೆದೊಯ್ಯುವ ಹಾಗೂ ‘ಉಳುವಾ ಯೋಗಿಯ ನೋಡಲ್ಲಿ’ ದೃಶ್ಯವನ್ನು ಸಿಮೆಂಟಿನಲ್ಲಿ ನಿರ್ವಿುಸಲಾಗಿತ್ತು. ಮೌನವಾಗಿ ನಿಂತಿದ್ದ ಮೂಕಪ್ರಾಣಿಗಳು ಕಿಡಿಗೇಡಿಗಳಿಗೆ ಧ್ವಂಸಕ್ಕೆ ಬಲಿಯಾಗಿದ್ದವು. ಈಗ ಅವುಗಳಿಗೆ ಮೂಲರೂಪ ನೀಡಲಾಗಿದ್ದು, ಬಾಲವೆತ್ತಿ ಅರ್ಭಟಿಸುವ ದೃಶ್ಯ ಗಮನ ಸೆಳೆಯುತ್ತಿದೆ.

ಪೊಲೀಸ್ ಚೌಕಿ ಇಲ್ಲ

ಬ್ಯಾಡಗಿ ಮಾರುಕಟ್ಟೆಗೆ ಮಾರಾಟದ ಹಂಗಾಮಿನಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ರೈತರು ಬಂದುಹೋಗುತ್ತಾರೆ. ಕಚೇರಿ ಹಾಗೂ ಮಾರುಕಟ್ಟೆ ರಕ್ಷಣೆಗೆ ಸಮರ್ಪಕವಾಗಿ ಪೊಲೀಸ್ ಸಿಬ್ಬಂದಿ ಇಲ್ಲ. ಎಪಿಎಂಸಿ ಅಧಿಕಾರಿಗಳೇ ಪೋನ್ ಮಾಡಿ, ಈ ದಿನ ಆವಕ ಹೆಚ್ಚಿದ್ದು ಪೊಲೀಸರನ್ನು ಕಳಿಸುವಂತೆ ಕೋರಿಕೊಂಡಲ್ಲಿ ರಿಸರ್ವ್ ಪೊಲೀಸ್, ಗಸ್ತು ವಾಹನ ಸಿಬ್ಬಂದಿ ಆಗಮಿಸುತ್ತಾರೆ. ಆದರೆ, ಎರಡು ದಶಕಗಳಿಂದ ಪೊಲೀಸ್ ಚೌಕಿ ನಿರ್ವಿುಸಿ, ಒಬ್ಬ ಎಎಸ್​ಐ ಹಾಗೂ ನಾಲ್ಕಾರು ಸಿಬ್ಬಂದಿ ನೇಮಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶಾಸಕರಿಂದ ಹಿಡಿದು ಮಾರುಕಟ್ಟೆ ಇಲಾಖೆ ಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಮಂಜೂರಾತಿ ಸಿಕ್ಕಿಲ್ಲ. ಏಳೆಂಟು ತಿಂಗಳ ಹಿಂದೆ ದುರ್ಘಟನೆ ನಡೆದಿದ್ದು, ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತುರ್ತು ಗಮನಿಸಬೇಕಿದೆ.

ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಡೆದ ದುರ್ಘಟನೆಯಿಂದ 2 ಕೋಟಿ ರೂ. ಅಧಿಕ ಹಾನಿಯಾಗಿದೆ. ಪರಿಣಾಮ ಆಡಳಿತ ಕಚೇರಿ, ಮಹತ್ವದ ದಾಖಲೆಗಳು, ವಾಹನಗಳು ಸುಟ್ಟುಹೋಗಿವೆ. 80 ಲಕ್ಷ ರೂಪಾಯಿಯಲ್ಲಿ ಕಚೇರಿಯನ್ನು ಮರು ನಿರ್ವಿುಸಲಾಗಿದೆ. ಕಚೇರಿಯ ಮುಂಭಾಗದಲ್ಲಿ ಹೊಸದಾಗಿ ಕಬ್ಬಿಣದ ಗ್ರಿಲ್​ಗಳನ್ನು ಅಳವಡಿಸಿದ್ದು, ಹೊರಭಾಗದ ಗ್ಲಾಸುಗಳಿಗೆ ರಕ್ಷಣೆಗಾಗಿ ಗ್ರಿಲ್, ಕಚೇರಿಯಿಂದ ಹೊರಹೋಗಲು ತುರ್ತು ಬಾಗಿಲು (ಎಕ್ಸಿಟ್), ಕಾಂಪೌಂಡ್ ಇನ್ನಷ್ಟು ಎತ್ತರಿಸಿ, ಹೈಟೆಕ್ ಮಾದರಿಯ ಸೋಲಾರ ವ್ಯವಸ್ಥೆಯಲ್ಲಿ ಸಿಸಿ ಕ್ಯಾಮರಾಗಳನ್ನು ಆಯ್ದ ಗೌಪ್ಯ ಜಾಗದಲ್ಲಿ ಅಳವಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲ ಸಿಬ್ಬಂದಿಯೊಂದಿಗೆ ಹೊಸ ಕಚೇರಿಗೆ ತೆರಳುತ್ತೇವೆ. | ಶೈಲಜಾ ಎಂ.ವಿ., ಎಪಿಎಂಸಿ ಕಾರ್ಯದರ್ಶಿ

ಬ್ಯಾಡಗಿಯ ಇತಿಹಾಸದಲ್ಲಿ ಇಂತಹ ಕೆಟ್ಟ ಘಟನೆ ನಡೆದಿರಲಿಲ್ಲ, ಆಕಸ್ಮಿಕವಾಗಿ ನಡೆದ ದುರಂತದಿಂದ ಮಾರುಕಟ್ಟೆಗೆ ಕಪ್ಪು ಚುಕ್ಕೆ ಬಂದಿದೆ. ಆದರೆ, ನೈಜ ರೈತರು ಇಂತಹ ಚಟುವಟಿಕೆಯಲ್ಲಿ ಎಂದಿಗೂ ಪಾಲ್ಗೊಳ್ಳುವುದಿಲ್ಲ, ಕೆಲ ಕಿಡಿಗೇಡಿಗಳು ಘಟನೆಗೆ ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ. ಎಂದಿಗೂ ರೈತರು ಇಂತಹ ದುಷ್ಕೃತ್ಯಗಳಿಗೆ ಸಹಕರಿಸಬಾರದು. ಹಾನಿಯಾದ ಆಡಳಿತ ಕಚೇರಿ ಹಳೆಯ ವೈಭವ ಪಡೆದುಕೊಂಡಿರುವುದು ಸಂತಸ ಮೂಡಿಸಿದೆ. | ಬಸವರಾಜ ಛತ್ರದ, ಮೆಣಸಿನಕಾಯಿ ಖರೀದಿದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net