

ಶಶಿ ಕುತ್ಯಾಳ ಈಶ್ವರಮಂಗಲ
ಪುತ್ತೂರು ತಾಲೂಕಿನ ನಿಡ್ಪಳ್ಳಿ, ಇರ್ದೆ ಮತ್ತು ಶಾಂತಿಗೋಡು ಗ್ರಾಮಗಳಲ್ಲಿ 2023ರ ಜನವರಿಯಲ್ಲಿ ಆರಂಭಿಸಲಾಗಿದ್ದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಮೊದಲ ಹಂತದಲ್ಲೇ ಸ್ಥಗಿತಗೊಂಡಿವೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಗಿತಗೊಳಿಸಲಾಗಿರುವ ಕಟ್ಟಡ ಕಾಮಗಾರಿಗಳನ್ನು ಹೊಸ ಸರ್ಕಾರ ಬಂದು ವರ್ಷ ಕಳೆದರೂ ಇನ್ನೂ ಪೂರ್ಣಗೊಳಿಸುವ ಕೆಲಸ ನಡೆದಿಲ್ಲ. ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕೆಆರ್ಐಡಿಎಲ್ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ದಲಿತರ ವ್ಯವಸ್ಥೆಗೆ ಗ್ರಹಣ ಹಿಡಿದಿದೆ.
ನಿಡ್ಪಳ್ಳಿ ಗ್ರಾಪಂ ವ್ಯಾಪ್ತಿಯ ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಪಂ ವ್ಯಾಪ್ತಿಯ ಇರ್ದೆ ಮತ್ತು ನರಿಮೊಗರು ಗ್ರಾಪಂ ವ್ಯಾಪ್ತಿಯ ಶಾಂತಿಗೋಡು ಗ್ರಾಮಗಳಲ್ಲಿ ದಲಿತ ಸಮುದಾಯದ ಚಟುವಟಿಕೆಗಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ಭವನ ನಿರ್ಮಿಸಬೇಕೆನ್ನುವುದು ಗ್ರಾಮ ವ್ಯಾಪ್ತಿಯ ದಲಿತ ಸಮುದಾಯದ ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಬೇಡಿಕೆಗೆ 2019-20ನೇ ಸಾಲಿನಲ್ಲಿ ಆಗಿನ ಬಿಜೆಪಿ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಸ್ಪಂದಿಸಿತ್ತು.
ಸಮಾಜ ಕಲ್ಯಾಣ ಇಲಾಖೆ 2019-20ನೇ ಸಾಲಿನಲ್ಲಿ ಈ ಮೂರು ಕಡೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ತಲಾ 20 ಲಕ್ಷ ರೂ. ಅನುದಾನದಂತೆ ಒಟ್ಟು 60 ಲಕ್ಷ ರೂ. ಮಂಜೂರು ಮಾಡಿತ್ತು. ಈ ಮೂರು ಕಡೆಗಳಲ್ಲಿನ ಅಂಬೇಡ್ಕರ್ ಭವನ ಕಾಮಗಾರಿ ನಿರ್ವಹಿಸುವ ಜವಾಬ್ದಾರಿಯನ್ನು ಕೆಆರ್ಐಡಿಎಲ್ ಸಂಸ್ಥೆಗೆ ವಹಿಸಿ ಕೊಟ್ಟು ಒಟ್ಟು 18 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿತ್ತು.
ನಿಡ್ಪಳ್ಳಿ ಗ್ರಾಮದ ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕಾಯ್ದಿರಿಸಿದ 18 ಸೆಂಟ್ಸ್ ಜಾಗದ ಪೈಕಿ 10 ಸೆಂಟ್ಸ್ ಸ್ಥಳದಲ್ಲಿ 2023ನೇ ಸಾಲಿನ ಜನವರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಕಾಂಕ್ರೀಟ್ ಬೆಲ್ಟ್ ಬಳಸಿದ ಅಡಿಪಾಯದೊಂದಿಗೆ ಪಿಲ್ಲರ್ ಅಳವಡಿಸಿ ಆರಂಭಿಸಲಾಗಿದ್ದ ಕಾಮಗಾರಿ ಲಿಂಟಲ್ ಹಂತದಲ್ಲೇ ಸ್ಥಗಿತಗೊಂಡಿದೆ. ಕಳೆದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲು ಅಪೂರ್ಣ ಗೋಡೆ ಹಂತದಲ್ಲಿ ಅರ್ಧಂಬರ್ಧ ಸ್ಥಿತಿಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಮತ್ತೆ ಮುಂದುವರಿಸುವ ಕೆಲಸ ಈ ತನಕ ನಡೆದಿಲ್ಲ.
ಬೆಟ್ಟಂಪಾಡಿ ಗ್ರಾಪಂ ವ್ಯಾಪ್ತಿಯ ಇರ್ದೆಯಲ್ಲಿನ ಅಂಬೇಡ್ಕರ್ ಭವನ ಕಾಮಗಾರಿ ಫೌಂಡೇಷನ್ ಹಂತದಲ್ಲೇ ಬಾಕಿಯಾಗಿದೆ.ನರಿಮೊಗರು ಗ್ರಾಪಂ ವ್ಯಾಪ್ತಿಯ ಶಾಂತಿಗೋಡಿನ ಅಂಬೇಡ್ಕರ್ ಭವನ ಕಾಮಗಾರಿ ಗೋಡೆ-ಲಿಂಟಲ್ ಹಂತದಲ್ಲಿ ಸ್ಥಗಿತಗೊಂಡಿದೆ. ಈ ಕಾಮಗಾರಿಗಳನ್ನು 2023ನೇ ಸಾಲಿಲ್ಲಿ ಆರಂಭಿಸಲಾಗಿತ್ತು.
ನಿಡ್ಪಳ್ಳಿ, ಇರ್ದೆ ಮತ್ತು ಶಾಂತಿಗೋಡಿನಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಗೋಡೆ ಹಂತದಲ್ಲೇ ಬಾಕಿಯಾಗಿರುವ ಅಂಬೇಡ್ಕರ್ ಭವನ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ದಲಿತ ಮುಖಂಡರು ಸ್ಥಳೀಯ ಶಾಸಕರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ನಡುವೆ ಮಂಗಳೂರಿನ ಕೆಆರ್ಐಡಿಎಲ್ ಸಂಸ್ಥೆಯ ಕಾರ್ಯಪಾಲಕ ಅಭಿಯಂತ ಫೆಬ್ರವರಿಯಲ್ಲಿ ನಿಡ್ಪಳ್ಳಿ, ಇರ್ದೆ ಮತ್ತು ಶಾಂತಿಗೋಡಿನ ಅಂಬೇಡ್ಕರ್ ಭವನ ಕಾಮಗಾರಿಗಳ ಒಟ್ಟು 60 ಲಕ್ಷ ರೂ. ಅನುದಾನದ ಪೈಕಿ ಬಾಕಿ ಇರುವ 42 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕೆಂದು ಸಮಾಜಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಾರೆ.
ಅಂಬೇಡ್ಕರ್ ಭವನದ ಗೋಡೆಯ ಕೆಲಸ ಮಾತ್ರ ಆಗಿದ್ದು, ಮೇಲ್ಛಾವಣಿ ನಿರ್ಮಾಣ, ಕಿಟಕಿ ಬಾಗಿಲುಗಳ ಜೋಡಣೆ, ಎದುರು ಭಾಗದಲ್ಲಿ ಸಿಟೌಟ್ ನಿರ್ಮಾಣ, ಸಾರಣೆ ಕಾಮಗಾರಿಗಳು ಬಾಕಿಯಿದೆ. ನಾಲ್ಕೈದು ಲಕ್ಷ ರೂ. ಕಾಮಗಾರಿ ಮಾತ್ರ ಇಲ್ಲಿ ನಡೆದಿರಬಹುದು. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು.-ಕೃಷ್ಣ ನಿಡ್ಪಳ್ಳಿ, ಸ್ಥಳೀಯ ದಲಿತ ಮುಖಂಡ
ಅಂಬೇಡ್ಕರ್ ಭವನ ಕಾಮಗಾರಿಯನ್ನು ಕೆಆರ್ಐಡಿಎಲ್ ಸಂಸ್ಥೆ ನಿರ್ವಹಿಸುತ್ತಿದೆ. ಒಪ್ಪಂದದ ಪ್ರಕಾರ ಅವರು ಮೊದಲ ಕಂತಿನ ಹಣ ಪಡೆದು ಕಾಮಗಾರಿ ಪೂರ್ಣಗೊಳಿಸಬೇಕು. ಬಳಿಕ ಉಳಿದ ಅನುದಾನದ ಪಾವತಿಗಾಗಿ ಬೇಡಿಕೆ ಸಲ್ಲಿಸಬೇಕಿತ್ತು. ಆದರೆ ಮೊದಲ ಹಂತದಲ್ಲೇ ಕಾಮಗಾರಿ ಸ್ಥಗಿತಗೊಳಿಸಿದೆ. ಈ ಸಂಬಂಧ ಇಲಾಖೆೆಯಿಂದ ಗುತ್ತಿಗೆ ಸಂಸ್ಥೆಗೆ ಮೂರು ಬಾರಿ ನೋಟೀಸು ಕಳುಹಿಸಲಾಗಿದೆ.-ಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ