

ಶಿವಮೊಗ್ಗ: ಹೈ5 ಸ್ಟುಡಿಯೋಸ್ ಲಾಂಛನ ಹಾಗೂ ಎಸಿಇ 22 ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಕನ್ನಡದ ‘ಎಲ್ಟು ಮುತ್ತಾ’ ಚಿತ್ರವು ತೆರೆಕಾಣಲು ಸಜ್ಜಾಗಿದೆ. ಟೀಸರ್ ಜತೆಗೆ ಐದು ಹಾಡುಗಳ ಆಡಿಯೋ ಬಿಡುಗಡೆ ಮೂಲಕ ಕನ್ನಡದ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ ಎಂದು ಚಿತ್ರದ ನಿರ್ಮಾಪಕ ಸತ್ಯ ಎಸ್.ಶ್ರೀನಿವಾಸನ್ ಹೇಳಿದರು.
ಮೂಲತಃ ಕೊಡಗಿನವರಾದ ರಾ.ಸೂರ್ಯ ನಿರ್ದೇಶನದ ಚಿತ್ರ ಪೂರ್ಣ ಪ್ರಮಾಣದಲ್ಲಿ ಕೊಡಗಿನ ಸೊಗಡನ್ನೇ ಇಟ್ಟುಕೊಂಡು ನಿರ್ಮಾಣವಾಗಿದೆ. ಕನ್ನಡದ ಮಟ್ಟಿಗೆ ಮೊದಲ ಪ್ರಯತ್ನ ಇದಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದ್ಯಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಕನ್ನಡದಲ್ಲಿ ಜುಲೈ ಕೊನೇ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ನಂತರ ತೆಲುಗು ಹಾಗೂ ಉಳಿದ ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂದರು.
ನಿರ್ದೇಶಕ ರಾ. ಸೂರ್ಯ ಮಾತನಾಡಿ, ಕೊಡಗಿನ ನೇಟಿವಿಟಿ ಮೇಲೆ ಸಿನಿಮಾ ಮಾಡಿದ್ದೇವೆ. ಸಾವಿಗೆ ಡೋಲು ಬಡಿಯುವವರ ಸುತ್ತಣ ನಡೆಯುವ ಕಥೆ ಇದು. ಇದು ಶೇ.80ರಷ್ಟು ಸಿನಿಮಾ ಕೊಡಗಿನಲ್ಲೇ ಪ್ರಕೃತಿದತ್ತ ಮಳೆಯಲ್ಲಿ ಚಿತ್ರೀಕರಣಗೊಂಡಿದೆ. ಕಥೆಗಳ ಜತೆಗೆ ಪಾತ್ರ ವರ್ಗವೂ ವಿಶಿಷ್ಟವಾಗಿದೆ ಎಂದರು.
ನಾಯಕ ನಟ ಶೌರ್ಯ ಪ್ರತಾಪ್, ನಟ ರೋಹನ್ ಆರ್ಯ, ಸಂಗೀತ ನಿರ್ದೇಶಕ ಪ್ರಸನ್ನ ಅವರು ಪಾತ್ರಗಳ ಬಗ್ಗೆ ವಿವರಿಸಿದರು. ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.