

ಕುಂದಾಪುರ: ನವರಾತ್ರಿಯ ಆಚರಣೆಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಯಶಸ್ವೀ ಕಲಾವೃಂದ ಹಳೇ ಯಕ್ಷ ಕಲಾ ಪ್ರಕಾರವಾದ ಹೂವಿನಕೋಲನ್ನು ನವರಾತ್ರಿ ಸಂದರ್ಭದಲ್ಲಿ ಕರಾವಳಿಯುದ್ದಕ್ಕೂ ಮನೆ ಮನೆಗೆ ತಂಡ ಕೊಂಡೊಯ್ದು ಮನೆಯ ಮನಗಳಿಗೆ ಹರಸಿ ಪ್ರದರ್ಶಿಸುವ ಕಲೆ ಚಿತ್ತಾಕರ್ಷಕವಾದದ್ದು. ಮಕ್ಕಳ ನಿರರ್ಗಳ ಮಾತುಗಾರಿಕೆ ಹೂವಿನಕೋಲಿನಂತಹ ಕಲಾ ಪ್ರಕಾರದಲ್ಲಿ ಬೆಳೆದಿದೆ ಎನ್ನಬಹುದು. ಈ ತಂಡದಲ್ಲಿ ಭಾಗವಹಿಸಿದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಧರ್ಮಸ್ಥಳ ದೇಗುಲದ ಹೇಮಾವತಿ ಹೆಗ್ಗಡೆ ಅಭಿಪ್ರಾಯಪಟ್ಟರು.
ಧರ್ಮಸ್ಥಳದ ದೇಗುಲದಲ್ಲಿ ಶನಿವಾರ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಹೂವಿನಕೋಲು ಅಭಿಯಾನ ಉದ್ದೇಶಿಸಿ ಮಾತನಾಡಿದರು.
ಪ್ರದರ್ಶನದ ಜತೆಗೆ ಕಲಿಕೆಯನ್ನು ಒಳಗೊಂಡ ಈ ಪ್ರಕಾರ ಮಕ್ಕಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಹೆಚ್ಚು ಪೂರಕ. ಮೊಬೈಲ್ ಯುಗದಲ್ಲಿಯೂ ಗಮನ ಸೆಳೆಯುವ ಈ ಕಲೆಯನ್ನು ಸಮಾಜದ ಗಣ್ಯರು ಪೋಷಿಸಬೇಕು ಎಂದು ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು.
ಅನಂತ ಪದ್ಮನಾಭ ಬೆಂಗಳೂರು, ಚಂದ್ರಿಕಾ ಹೆಬ್ಬಾರ್, ನೀಲಕಂಠ ಉಪಾಧ್ಯಾಯ, ಭಾಗ್ಯಲಕ್ಷ್ಮೀ ವೈದ್ಯ, ರಾಹುಲ್ ಕುಂದರ್ ಕೋಡಿ ಕನ್ಯಾಣ, ಪಂಚಮಿ ವೈದ್ಯ, ಆರಭಿ ಹೆಗಡೆ, ಪರಿಣಿತ ವೈದ್ಯ ಉಪಸ್ಥಿತರಿದ್ದರು.