ಸ್ವಸ್ಥ ಸಮಾಜಕ್ಕೆ ಸಹಕಾರ ಅಗತ್ಯ, ಡ್ರಗ್ಸ್‌ಮುಕ್ತ ಕರ್ನಾಟಕ ಅಭಿಯಾನಕ್ಕೆ ಚಾಲನೆ, ಬಿಜೆಪಿ ಯುವ ಮೋರ್ಚಾ ಆಯೋಜನೆ

02 Nela Ph 01 Street Play
Published on

ನೆಲಮಂಗಲ: ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ಸಹಕಾರ ಅಗತ್ಯ ಎಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಹೇಮಂತ್ ಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರದ ಬಳಿ ಬಿಜೆಪಿ ಯುವ ಮೋರ್ಚಾ ಗಣ್ಯರ ಜಯಂತಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಡ್ರಗ್ಸ್‌ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ವಿಶ್ವದಾದ್ಯಂತ ಕೋವಿಡ್-19 ಸೋಂಕು ವ್ಯಾಪಿಸಿದೆ. ಇನ್ನೊಂದೆಡೆ ಮಾದಕವಸ್ತುಗಳ ಜಾಲವೂ ಹಬ್ಬಿರುವುದು ಬೇಸರದ ಸಂಗತಿ. ಡ್ರಗ್ಸ್ ಎಂಬ ಮಾಯಜಾಲಕ್ಕೆ ಸಿಕ್ಕಿಹಾಕಿಕೊಳ್ಳದಂತೆ ಯುವ ಸಮುದಾಯವನ್ನು ರಕ್ಷಿಸಬೇಕಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಜನಜಾಗೃತಿ ಜಾಥಾ, ಬೀದಿನಾಟಕಗಳ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು.

ನೆಲಮಂಗಲ ವಿಧಾನಸಭಾ ಕ್ಷೇತ್ರದ 30ಕ್ಕೂ ಹೆಚ್ಚು ಗ್ರಾಮಪಂಚಾಯಿತಿಗಳಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಇದರ ಸಮಾರೋಪದ ಭಾಗವಾಗಿ ನಗರದಲ್ಲಿ ಜಾಥಾ ಆಯೋಜನೆಗೊಂಡಿದೆ ಎಂದು ತಿಳಿಸಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ರಾಹುಲ್ ಗೌಡ ಮಾತನಾಡಿ, ಯವಜನತೆ ದೇಶದ ಬಹುದೊಡ್ಡ ಸಂಪತ್ತು. ದೇಶವನ್ನು ಮುನ್ನೆಡಸಬೇಕಾದ ಯುವಶಕ್ತಿ ಕೆಟ್ಟ ಮಾರ್ಗ ಹಿಡಿಯುತ್ತಿರುವುದು ದೇಶಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸಿ ಅವರು ದೇಶದ ಶ್ರೇಯೋಭಿವೃದ್ಧಿ ಶ್ರಮಿಸಿದವರು. ಇಂತಹ ಮಹನೀಯರ ಜಯಂತಿಯನ್ನು ಸಾರ್ಥಕಗೊಳಿಸುವ ಉದ್ದೇಶದಿಂದ ಅಭಿಯಾನ ಆಯೋಜಿಸಲಾಗಿದೆ. ಕುಟುಂಬದ ಜತೆಗೆ ಸದೃಢ ದೇಶ ನಿರ್ಮಾಣದ ಹೊಣೆ ಯುವಜನತೆ ಮೇಲಿದೆ ಎಂದರು.

ಪ್ರವಾಸಿ ಮಂದಿರದ ಬಳಿ ಸಮಾವೇಶಗೊಂಡ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ತಾಲೂಕು ಕಚೇರಿವರೆಗೆ ಡ್ರಗ್ಸ್ ಕುರಿತಾದ ಜನಜಾಗೃತಿ ಜಾಥಾ ನಡೆಸಿದರು. ಬಳಿಕ ತಾಲೂಕು ಕಚೇರಿ ರಾಜಸ್ವ ನಿರೀಕ್ಷಕ ರವಿಕುಮಾರ್ ಹಾಗೂ ಡಿವೈಎಸ್‌ಪಿ ಮೋಹನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಬಸವನಹಳ್ಳಿ ಸ್ಪಾರ್ಕಲ್ ಡಾನ್ಸ್ ಫಿಟ್‌ನೆಸ್ ಸ್ಟುಡಿಯೋ ಕಲಾವಿದ ಪುನೀತ್ ನೇತೃತ್ವದಲ್ಲಿ ಮಕ್ಕಳು ಡ್ರಗ್ಸ್ ಕುರಿತಾದ ಬೀದಿನಾಟಕ ಪ್ರದರ್ಶಿಸಿದರು.

ಗ್ರಾಮಾಂತರ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್. ರಾಮ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೌಮ್ಯಾ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಕೀಲ ರವಿ, ರಾಜ್ಯ ಯುವ ಮೋರ್ಚಾ ಸಂಚಾಲಕ ಟಿ. ಸತೀಶ್, ಜಿಲ್ಲಾ ಕಾರ್ಯದರ್ಶಿ ಕೆ.ಎನ್. ರಕ್ಷಿತ್, ತಾಲೂಕು ಅಧ್ಯಕ್ಷ ಎನ್. ವಿಜಯ್‌ಕುಮಾರ್, ಉಪಾಧ್ಯಕ್ಷ ಎನ್.ಸಿ. ರುದ್ರೇಶ್, ಎನ್.ಎಸ್. ರವಿಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಸ್ನೇಕ್ ಅರುಣ್‌ಕುಮಾರ್, ಪುನೀತ್ ಗೌಡ, ಕಾರ್ಯದರ್ಶಿಗಳಾದ ಟಿ. ಮಂಜುನಾಥ್, ಎಂ. ಹರೀಶ್, ತೇಜಸ್, ಮುಖಂಡರಾದ ರಾಮಮೂರ್ತಿ, ಅಂಜನಾಮೂರ್ತಿ, ಮುನಿರಾಜು, ರವಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net