33 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

Screenshot_2023-03-26-22-06-40-31.jpg
Published on

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಬುಗಟೆ ಆಲೂರ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಸಂಜೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 33 ಲಕ್ಷ ರೂ. ಮೌಲ್ಯದ ಪಾಲ್ ಜಾನ್ ಬ್ರಿಲಿಯನ್ಸ್ ಸಿಂಗಲ್ ಮಾಲ್ಟ್ ವಿಸ್ಕಿಯ 50 ಬಾಕ್ಸ್ (450 ಲೀ.) ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನ ಚಾಲಕ ಧರ್ಮೇಂದ್ರ ಜಾಂಗೀರ ಹಾಗೂ ವಾಹನ ಮಾಲೀಕನ ವಿರುದ್ಧ ಹುಕ್ಕೇರಿ ವಲಯ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮ ಮದ್ಯ ಸಾಗಣೆಗೆ ಬಳಸಿಕೊಂಡಿದ್ದ 7 ಲಕ್ಷ ರೂ. ಮೌಲ್ಯದ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ.
 2.5 ಕೆ.ಜಿ. ಬೆಳ್ಳಿ ಆಭರಣ, 52 ಲೀ. ಮದ್ಯ ವಶಕ್ಕೆ:
 ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅನುಮತಿ ಇಲ್ಲದೆ ಹಾಗೂ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಕೆಜಿ ಬೆಳ್ಳಿ ಸರ ಮತ್ತು ಅಕ್ರಮ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
 ಕಾಗವಾಡ ತಾಲೂಕಿನ ಗಣೇಶವಾಡಿ ಚೆಕ್ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು 2.5 ಕೆಜಿ ಬೆಳ್ಳಿ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಬ್ ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣಕುಂಬಿ ಚೆಕ್ ಪೋಸ್ಟ್‌ನಲ್ಲೂ ಅಕ್ರಮವಾಗಿ ಸಾಗಿಸುತ್ತಿದ್ದ 52.875 ಲೀ. ಭಾರತೀಯ ನಿರ್ಮಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ 34 ಲೀ. ಬಿಯರ್ ಜಪ್ತಿ ಮಾಡಲಾಗಿದೆ. 78,284 ರೂ. ಮೌಲ್ಯದ ಮದ್ಯ, ಮದ್ಯ ಸಾಗಿಸುತ್ತಿದ್ದ 10 ಲಕ್ಷ ರೂ. ಮೌಲ್ಯದ ವಾಹನ ವಶಪಡೆದು, ಪ್ರಕರಣದಲ್ಲಿ ಭಾಗಿಯಾದ ಅಸ್ಸಾಂ ಚಾಲಕರಾದ ಬಿಪುಲ್‌ಕುಮಾರ್ ಕೊರುಮ್ಕರ, ಮನ್ನಾ ಕೆಚುವಾ ವಿರುದ್ಧ ಪ್ರಕರಣ ದಾಖಲಾಗಿದೆ.
 ಇನ್ನೂ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆ ಬೆಳಗಾವಿ ಕಿರ್ಲೋಸ್ಕರ್ ರಸ್ತೆಯ ಬಳಿ ದ್ವಿಚಕ್ರ ವಾಹನ ಮೇಲೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಮನೋಜ ರಾಮ ಭೋಗಣ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 11.700 ಲೀ. ಮದ್ಯ ಹಾಗೂ 1 ದ್ವಿಚಕ್ರ ವಾಹನ ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net