

ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮ ವಹಿಸಿದ್ದಾರೆ. ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಶೇ.95ರಷ್ಟು ಪ್ರಗತಿಯಾಗಿವೆ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.
ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಪಂಚಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಂತ್ರಿಕ ಮತ್ತು ಕೆಲವು ಸಮಸ್ಯೆಗಳಿಂದ ಬೆರಳೆಣಿಕೆಯಷ್ಟು ಜನರಿಗೆ ಸೌಲಭ್ಯ ತಲುಪಲು ಸಮಸ್ಯೆಯಾಗಿರಬಹುದು. ಅವುಗಳನ್ನು ಆಯಾ ಇಲಾಖೆ ಅಧಿಕಾರಿಗಳು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಅಧಿಕಾರಿಗಳ ಬಳಿ ಬಂದು ತಮ್ಮ ಸಮಸ್ಯೆ ನಿವೇದಿಸಿಕೊಂಡಾಗ ಅಧಿಕಾರಿಗಳು ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಎಲ್ಲ ಇಲಾಖೆಯವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿಸಿದರೆ ಮಾತ್ರ ಕ್ಷೇತ್ರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಪಂಚಗ್ಯಾರಂಟಿ ಯೋಜನಾ ಸಮಿತಿ ತಾಲೂಕಾಧ್ಯಕ್ಷ ನಾಗರಾಜ ಮಡಿವಾಳ, ಸರ್ಕಾರದ ಯೋಜನೆಗಳನ್ನು ಜನರಿಗೆ ಸರಿಯಾಗಿ ಮುಟ್ಟಿಸುವ ಕಾರ್ಯ ಮಾಡಬೇಕಿದೆ. ಜನರ ಸಮಸ್ಯೆ ಅರಿತು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸರ್ಕಾರ ಪಂಚಗ್ಯಾರಂಟಿ ಯೋಜನೆಗಳನ್ನು ಬಡವರಿಗಾಗಿಯೇ ಜಾರಿಗೆ ತರಲಾಗಿದ್ದು, ಅವುಗಳನ್ನು ಜನರಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದರು.
ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ನಾವು ವಿಶೇಷ ಕಾಳಜಿಯಿಂದ ಕಾರ್ಯ ಮಾಡುತ್ತೇವೆ. ತಾಲೂಕಿನಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಇದರಲ್ಲಿ ಅಧಿಕಾರಿಗಳ ಶ್ರಮ ಎದ್ದು ಕಾಣುತ್ತಿದೆ ಎಂದರು.
ಹೆಸ್ಕಾಂ, ಸಾರಿಗೆ, ಆಹಾರ, ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ, ಉದ್ಯೋಗ ವಿನಿಮಯ ಕೇಂದ್ರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಮಾಹಿತಿಯನ್ನು ಸಭೆಗೆ ಒದಗಿಸಿದರು. ತಾಪಂ ಇಒ ಕೃಷ್ಣಪ್ಪ ಧರ್ಮರ, ಸಮಿತಿ ಸದಸ್ಯರಾದ ರಮಜಾನಸಾಬ್ ನಧಾಪ್, ಜಯಕ್ಕ ಕಳ್ಳಿ, ಸಿದ್ಧಲಿಂಗೇಶ ರಗಟಿ, ನೂರಅಹ್ಮದ್ ರಿತ್ತಿ, ಶಶಿಕಲಾ ಬಡಿಗೇರ, ಹಸನ್ ಜಂಗ್ಲಿ, ಕಾರ್ತಿಕ ದೊಡ್ಡಮನಿ, ರಮೇಶ ಬಾರಕೇರ, ಸರ್ಪರಾಜ ಸೂರಣಗಿ, ಇತರರಿದ್ದರು.