

ಮಡಿಕೇರಿ: ನಂಜುಂಡಪ್ಪ ವರದಿಯಂತೆ ಜಿಲ್ಲೆ ಜಿಲ್ಲೆಗಳ ನಡುವೆ ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಕೃಷಿ, ಕೈಗಾರಿಕೆ, ಮತ್ತಿತರ ಸಂಬಂಧ ಅಸಮತೋಲನ ನಿವಾರಣೆ ಮಾಡುವಂತೆ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತ ಅಧಿಕಾರ ಸಮಿತಿ ಸದಸ್ಯರಾದ ಎಂ.ಎಚ್.ಸೂರ್ಯನಾರಾಯಣ ಸೂಚಿಸಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಮರು ಪರಿಶೀಲನೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳ ಜತೆ ಸುಧೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದು ಮಾತನಾಡಿದರು.
ರಾಜ್ಯದಲ್ಲಿ ಹಿಂದಿನ ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್ ಕರ್ನಾಟಕ, ಕೊಡಗು ಮತ್ತು ಹಳೇ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಜಿಲ್ಲೆಗಳು ವಿಭಿನ್ನತೆಯಿಂದ ಕೂಡಿವೆ. ಈ ಪ್ರದೇಶದಲ್ಲೂ ಅಂತರ್ ಜಿಲ್ಲಾ ಅಸಮತೋಲನತೆ ಇವೆ ಎಂದು ನಂಜುಂಡಪ್ಪ ವರದಿ ನೀಡಿದ್ದು, ಸಮಿತಿಯು ಅಂತಹ ಅಸಮತೋಲನೆ ಹಾಗೂ ವಿಶೇಷವಾಗಿ ಕರ್ನಾಟಕದ ದಕ್ಷಿಣ ಮತ್ತು ಉತ್ತರ ನಡುವಿನ ಅಸಮಾನತೆ ನಿವಾರಣೆ ಮಾಡಬೇಕಿದೆ ಎಂದರು.
ಅಭಿವೃದ್ಧಿ ಸೂಚ್ಯಂಕಗಳಲ್ಲಿ ಅಂತರ್ ಜಿಲ್ಲಾ ಮತ್ತು ಅಂತರ ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಇತರೆ ಜಿಲ್ಲೆಗಳಿಗಿಂತ ಹಿಂದುಳಿದಿರುವ ಜಿಲ್ಲೆಗಳು/ಪ್ರದೇಶಗಳ ಅಭಿವೃದ್ಧಿಗೆ ಸೂಕ್ತ ಕಾರ್ಯತಂತ್ರವನ್ನು ಸೂಚಿಸುವಂತೆ ನಂಜುಂಡಪ್ಪ ಸಮಿತಿಯಲ್ಲಿ ತಿಳಿಸಲಾಗಿದೆ. ಕೃಷಿ, ತೋಟಗಾರಿಕೆ, ಆಹಾರ ಧಾನ್ಯ ಬೆಳೆಯುವ ಪ್ರದೇಶ, ವಾಣಿಜ್ಯ ಬೆಳೆಗಳ ಪ್ರದೇಶ, ನಿವ್ವಳ ಭಿತ್ತನೆ ಪ್ರದೇಶ, ಪ್ರತೀ ಹೆಕ್ಟೇರ್‌ಗೆ ರಸಗೊಬ್ಬರ, ಪ್ರತೀ ಲಕ್ಷ ಜನಸಂಖ್ಯೆಗೆ ಟ್ರಾಕ್ಟರ್‌ಗಳ ಸಂಖ್ಯೆ, ಪ್ರತೀ ಲಕ್ಷ ಗ್ರಾಮೀಣ ಜನಸಂಖ್ಯೆಗೆ ಲೈವ್ ಸ್ಟಾಕ್ ಘಟಕಗಳು, ಕೃಷಿಗೆ ತಲಾ ಬ್ಯಾಂಕ್ ಸಾಲ, ಹೀಗೆ ಹಲವು ಅಂಶಗಳನ್ನು ಒಳಗೊಂಡಿದೆ ಎಂದು ಸೂರ್ಯನಾರಾಯಣ ವಿವರಿಸಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬಂಧಿಸಿದಂತೆ ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ತೋಟಗಾರಿಕೆ, ವ್ಯಾಪಾರ ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಮುನ್ನಡೆಯಬೇಕಿದೆ. ಆ ನಿಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾಗಿ ಮಾಹಿತಿ ನೀಡುವಂತಾಗಬೇಕು. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಿ ಸಮಾಜದಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸುವಲ್ಲಿ ಶ್ರಮಿಸಬೇಕಿದೆ ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಘವ ಮಾತನಾಡಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯತ್ತ ಮುನ್ನಡೆಯಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ಜೊತೆಗೆ ಪ್ರತಿಯೊಬ್ಬರಿಗೂ ಉದ್ಯೋಗ ದೊರೆತಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.
ಆರ್.ಸಿ.ಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ಹಾಡಿಗಳು ಹಾಗೂ ಲೈನ್‌ಮನೆಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.
ರೋಟರಿ ಸಂಸ್ಥೆಯ ನಿರ್ದೇಶಕ ಎಚ್.ಟಿ.ಅನಿಲ್ ಮಾತನಾಡಿ, ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾದ ವಿವಿಧ ಉದ್ಯಮಗಳಿಗೆ ಉತ್ತೇಜನ ನೀಡಿದ್ದೇ ಆದಲ್ಲಿ ಕೊಡಗಿನ ಯುವಜನಾಂಗ ಉದ್ಯೋಗ ಅರಸಿ ಹೊರ ಜಿಲ್ಲೆಗಳಿಗೆ ತೆರಳುವುದು ತಪ್ಪುತ್ತದೆ. ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿಯೇ ಹೊಸ ಉದ್ಯಮಗಳನ್ನು ಪ್ರಾರಂಭಿಸಲೂ ಉತ್ತೇಜನ ಕೊಡಬೇಕು. ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇದನ್ನು ಪರಿಹರಿಸುವಂತಾಗಬೇಕು ಎಂದು ಕೋರಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ ಮಾತನಾಡಿ, ಅಭಿವೃದ್ಧಿ ಸೂಚ್ಯಂಕದಲ್ಲಿ ಸಾಕ್ಷರತೆ ಅತೀ ಮುಖ್ಯವಾಗಿದೆ. ಪ್ರತಿಯೊಬ್ಬರೂ ಅಕ್ಷರ ಕಲಿತಲ್ಲಿ ಅಭಿವೃದ್ಧಿ/ಪ್ರಗತಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತ್ಯೇಕವಾಗಿ ಮುಖ್ಯೋಪಾಧ್ಯಾಯರನ್ನು ನೇಮಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ದಿಲನ್ ಮುತ್ತಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕನಟರಾಜು ಇತರರು ಇದ್ದರು.