

ಕುಮಟಾ: ಇಲ್ಲಿನ ಭಾರತೀಯ ಕುಟುಂಬ ಯೋಜನಾ ಸಂಘದ ಶಾಖೆಯಲ್ಲಿ ಶಿರಸಿಯ ಪ್ರಜ್ವಲ ಟ್ರಸ್ಟ್ ಹಾಗೂ ಕೋರ್ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಗಾರ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತೆ ಹಾಗೂ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ ಕೃಷ್ಣಿ ಶಿರೂರ ಹುಬ್ಬಳ್ಳಿ, ಕ್ಯಾನ್ಸರ್ ಕಾಯಿಲೆ ತಡೆಗಟ್ಟುವ ವಿಧಾನ, ಪೀಡಿತರಿಗೆ ವಿಶೇಷವಾಗಿ ಮುದ್ರಾ ಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಇತ್ತೀಚಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಬಿ.ಪಿ., ಶುಗರ್, ಮೆನೊಪಾಸ್, ಪಿಸಿಒಡಿ ಮುಂತಾದ ಹಲವಾರು ಕಾಯಿಲೆಗಳ ನಿಯಂತ್ರಣಕ್ಕೂ ವಿಶೇಷ ರೀತಿಯ ಮುದ್ರೆಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ಡಾ. ಅಶೋಕ ಭಟ್ಟ ಹಳಕಾರ, ಎಲ್ಲರಿಗೂ ಯೋಗ, ಪ್ರಾಣಾಯಾಮಗಳು ಅತ್ಯಂತ ಮುಖ್ಯ. ಇಂತಹ ಉಪಯುಕ್ತ ಕಾರ್ಯಕ್ರಮಗಳಿಂದ ರೋಗದ ಭಯ ನಿವಾರಣೆಯ ಜತೆಗೆ ಚಿಕಿತ್ಸೆಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಪ್ರಾಣಾಯಾಮ, ಲಘು ವ್ಯಾಯಾಮ ಹಾಗೂ ಜೀವನದಲ್ಲಿ ಕ್ಷಮೆಯ ಮಹತ್ವಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ವೈದ್ಯಾಧಿಕಾರಿ ಡಾ. ಅನುರಾಧ, ಸ್ವಚ್ಛತೆಯ ಕುರಿತು ವಿವರಿಸಿದರು. ಡಾ. ರಾಧಿಕಾ ದಿನನಿತ್ಯದಲ್ಲಿ ಬೇಕಾಗುವ ಮನೆ ಮದ್ದು ಹಾಗೂ ಆರೋಗ್ಯ ಮಾಹಿತಿ ನೀಡಿದರು. ಕೋರ್ ಸಂಸ್ಥೆಯ ಪೂರ್ಣಿಮಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆದರ್ಶಗಳನ್ನು ತಿಳಿಸಿಕೊಟ್ಟರು. ಕುಟುಂಬ ಯೋಜನಾ ಸಂಘದ ಶಾಖಾ ವ್ಯವಸ್ಥಾಪಕಿ ಸಂತಾನ ಲೂಯಿಸ್ ವಂದಿಸಿದರು. ಮೈತ್ರಿ ಕಾರ್ಯಕ್ರಮ ನಿರ್ವಹಿಸಿದರು.